ಸೂರ್ಯನ ಕರಜಾಲಂಗಳು
ಸೂರ್ಯೋದಯವಾದಲ್ಲಿ ಹುಟ್ಟಿ,
ಸೂರ್ಯನು ಅಸ್ತಮಿಸಲು ಕೂಡ ಅಡಗುವಂತೆ,
ಮನೋವಿಕಾರದಿಂದ ಲೋಕವೆಲ್ಲವೂ ತೋರಿ,
ಮನ ಲಯವಾದೊಡನೆ ಆ ಲೋಕವೆಲ್ಲವೂ ಅಡಗಿ,
ಜ್ಞಾನತತ್ವವೊಂದೇ ತನ್ನ ಸ್ವರೂಪವಾಗಿ ಉಳಿದಿಹ ಯೋಗಿಗೆ
ಮುಂದೆ ಅರಿಯಬೇಕಾದುದೊಂದೂ ಇಲ್ಲವಯ್ಯ.
ಉಳಿದ ಉಳುಮೆ ಜ್ಞಾನರೂಪಾಗಿ ನಿಂದಿತಯ್ಯಾ,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ ಶರಣಂಗೇ.