Index   ವಚನ - 414    Search  
 
ಕಾರ್ಯಕಾರಣವಾದ ತತ್ವ ವಿತತತ್ವಂಗಳೆಲ್ಲ ತೋರಿಯಡಗುವ ಇಂದ್ರಚಾಪದಂತೆ, ಸಾವಯ ನಿರವಯವಾಗಿ, ಉಂಟಿಲ್ಲವೆಂಬ ರೂಪು ನಿರೂಪುಗಳೆಲ್ಲ ಅಜ್ಞಾನವಶದಿಂದ ತೋರುತ್ತಿಹವಾಗಿ ಅಂತಪ್ಪ ಅಜ್ಞಾನದ ಬಲುಹಿಂದ, ನಾನು ನನ್ನದೆಂಬ ಅಹಂಕಾರ ಮಮಕಾರ ಮೊದಲಾದವೆಲ್ಲವೂ ತೋರುತ್ತಿಹವು. ಇಂತಪ್ಪ ಅಹಂಕಾರ ಮಮಕಾರ ಮೊದಲಾದವೆಲ್ಲವ ನೇತಿಗಳೆವುದೇ ಬ್ರಹ್ಮಜ್ಞಾನವು. ಅಂತಪ್ಪ ಬ್ರಹ್ಮಜ್ಞಾನಿಯಾದ ಶರಣನಲ್ಲಿ ಏನೂ ತೋರಿಕೆಯಿಲ್ಲದೆ ಜ್ಞಾನ ಜ್ಞೇಯಂಗಳೇಕವಾಗಿ, ಜ್ಞಾನ ನಿಃಪತಿಯಾದುದೇ ಲಿಂಗೈಕ್ಯವಯ್ಯಾ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರ.