ಚಂದ್ರ ಚಂದ್ರಿಕೆಯಂತೆ, ಅಗ್ನಿ ಉಷ್ಣದಂತೆ,
ರತ್ನ ಕಾಂತಿಯಂತೆ,
ಬ್ರಹ್ಮವ ಬಿಡದೆ ತೋರುವ ಬ್ರಹ್ಮಶಕ್ತಿ
ಬ್ರಹ್ಮದ ಅಂತಃಕರಣವಾದ ಕಾರಣ
ವಿಶ್ವಭಾಜನವೆನಿಸಿತ್ತು.
ಬೀಜದಲ್ಲಿ ವೃಕ್ಷ ಪತ್ರೆ ಫಲಂಗಳು ತೋರುವಂತೆ,
ಬ್ರಹ್ಮದ ಹೃದಯಬೀಜದಲ್ಲಿ ವಿಶ್ವವು ತೋರುವುದಾಗಿ,
ಆ ವಿಶ್ವಭಾಜನವಾದ ಚಿತ್ತೇ ತನ್ನ ಸ್ವರೂಪವೆಂದು
ಕಂಡ ಜೀವನ್ಮುಕ್ತಂಗೆ
ವಿಧಿ-ನಿಷೇಧ, ಸಂಕಲ್ಪ- ವಿಕಲ್ಪ,
ಪ್ರಕೃತಿ-ವಿಕೃತಿ ಮೊದಲಾದ
ಜಗದ್ವ್ಯಾಪಾರವೆಂಬುದೇನೂ ಇಲ್ಲ,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ,
ನಿಮ್ಮ ಶರಣ ನಿಮ್ಮ ಕೂಡಿ ನಿಮ್ಮಂತಿಹನು.