Index   ವಚನ - 85    Search  
 
ಮತ್ತೆಯುಂ ಚಕ್ರದ ಪೂರ್ವಾದೀಶಾನಾಂತವಾಗಿ ದಳನ್ಯಸ್ತವಾದಕಾರಾದಿ ಕ್ಷಕಾರಾಂತಮಾದಕ್ಷರಮಾಲಿಕೆಯೆ ಸೃಷ್ಟಿವರ್ಗವೆನಿಪುದದರೊಳಷ್ಟ ವರ್ಗಂಗಳುಂಟವೆಂತೆನೆ- ಅಕಾರಾದ್ಯಃಕಾರಂತಮಾದ ಷೋಡಶ ಸ್ವರೋತ್ಕರವೆ ಅವರ್ಗಮೆನಿಕ್ಕುಂ. ಕಕಾರದಿ ಙಕಾರಾಂತವಾದೈದಕ್ಕರವೆ ಕವರ್ಗಮೆನಿಕುಂ. ಚಕಾರಾದಿ ಞಕಾರಾಂತವಾದೈದಕ್ಕರವೆ ಚವರ್ಗಮೆನಿಕುಂ. ಟಕಾರಾದಿ ಣಕಾರಾಂತವಾದೈದಕ್ಕರವೆ ಟವರ್ಗಮೆನಿಕುಂ. ತಕಾರಾದಿ ನಕಾರಾಂತಮಾದೈದಕ್ಕರವೆ ತವರ್ಗಮೆನಿಕುಂ. ಪಕಾರಾದಿ ಮಕಾರಾಂತಮಾದೈದಕ್ಕರವೆ ಪವರ್ಗಮೆನಿಕುಂ. ಯಕಾರಾದಿ ವಕಾರಾಂತಮಾದ ನಾಲ್ಕಕ್ಕರವೆ ಯವರ್ಗಮೆನಿಕುಂ. ಶಕಾರಾದಿ ಕ್ಷಕಾರಾಂತವಾದಾರಕ್ಕರವೆ ಶವರ್ಗಮೆನಿಕುಂ. ಇಂತು ಕಚಟತಪಯಶಂಗಳೆಂಬಿವೆ ಅಷ್ಟವರ್ಗಂಗಳಿವಕ್ಕೆ ತರದಿಂದಷ್ಟ ದಿಕ್ಷತಿಗಳಂ ಪೇಳ್ವೆನೆಂತೆನೆ- ಅವರ್ಗಮಿಂದ್ರ ಕವರ್ಗಮಗ್ನಿ ಚವರ್ಗ ಯಮ ಟವರ್ಗ ನಿರುತಿ ತವರ್ಗ ವರುಣ ಪವರ್ಗ ವಾಯು ಯವರ್ಗ ಕುಬೇರ ಶವರ್ಗವಿೂಶಾನಮಿಂತಿದು ಸೃಷ್ಟಿವರ್ಗಂ. ಸದಾಶಿವಮಂತ್ರಂಗಳ್ಪಂಚ ಬ್ರಹ್ಮಮಂತ್ರಂಗಳ್. ಷಡಂಗಮಂತ್ರಂಗಳ್ಸಕಲ ಸೌಮ್ಯಮಂತ್ರಗಳಾವವುಂಟವನೆಲ್ಲಮಂ ಸೃಷ್ಟಿವರ್ಗದಲ್ಲಿಯೆ ತಿಳಿವುದೆಂದು ನಿರವಿಸಿದೆಯಯ್ಯಾ, ಪರಿಪೂರ್ಣ ಪರಂಜ್ಯೋತಿ ಸ್ವರೂಪ ಪರಮ ಶಿವಲಿಂಗೇಶ್ವರ.