Index   ವಚನ - 133    Search  
 
ಮತ್ತಮಾ, ಪೃಥ್ವ್ಯದಿಭೂತಂಗಳಂ ಪೆತ್ತ ಸದ್ಯಾದಿ ಪಂಚಬ್ರಹ್ಮಮೂರ್ತಿಗಳ ಲಕ್ಷಣಂಗಳಂ ಬೇರೆ ಬೇರೆ ವಿವರಿಸಿದಪೆನೆಂತೆನೆ- ಗೋಕ್ಷೀರ ಶಂಖವರ್ಣದಿಂದೆ, ಜಟಾಮಕುಟದಿಂದೆ, ಚತುರ್ಮುಖದಿಂದೆ, ಚತುರ್ಭುಜದಿಂದೆ, ದ್ವಾದಶನೇತ್ರದಿಂದೆ, ಸರ್ವಾಭರಣಂಗಳಿಂದೆ, ಸದ್ಯೋಜಾತಬ್ರಹ್ಮ ವಿರಾಜಿಕುಂ. ಜಪಾಕುಸುಮವರ್ಣದಿಂದೆ, ಜಟಾಮಕುಟದಿಂದೆ, ಚತುರ್ಮುಖದಿಂದೆ, ಚತುರ್ಭುಜದಿಂದೆ, ದ್ವಾದಶನೇತ್ರದಿಂದೆ, ಸರ್ವಾವಯ ಸಂಪತ್ತಿಯಿಂದೆ, ರಕ್ತವಸ್ತ್ರದಿಂದೆ, ರಕ್ತ[ವ]ಸ್ರೋತ್ತರೀಯದಿಂದೆ,, ದಕ್ಷಿಣಭುಜದ್ವಯ ವಿಲಸಿತಾಭಯ ಟಂಕಂಗಳಿಂದೆ, ವಾಮಭುಜದ್ವಯ ವಿಲಸಿತ ವರಶೂಲಂಗಳಿಂದೆ, ರಕ್ತಗಂಧಾನುಲೇಪದಿಂದೆ, ರಕ್ತಮಾಲ್ಯಂಗಳಿಂದೆ ಸರ್ವಲಕ್ಷಣದಿಂದೆ, ಸರ್ವಾಭರಣದಿಂದೆ, ಸರ್ವವಶ್ಯಕರಮಾದ ವಾಮದೇವಬ್ರಹ್ಮಂ ವಿರಾಜಿಕುಂ. ಪುಡಿಗರ್ಪಿನ ಕಾಂತಿಯಿಂದೀ, ಚತುರ್ಮುಖದಿಂ, ಚತುರ್ಭುಜದಿಂ, ರೌದ್ರರೂಪದಿಂ, ಜಟಾಮಕುಟದಿಂ, ದ್ವಾದಶನೇತ್ರದಿಂ, ದುಷ್ಟ್ರ ಕರಾಳವದನದಿಂ, ವ್ಯಾಘ್ರಚರ್ಮಾಂಬರದಿಂ, ವ್ಯಾಘ್ರಚರ್ಮೋತ್ತರೀಯದೀ, ನೂಪುರಾಂಚಿತ ಚರಣದಿಂ, ಸರ್ವಾಭರಣದಿಂ, ದಿವ್ಯಗಂಧಮಾಲ್ಯಾದಿಗಳಿಂ, ಟಂಕ ಶೂಲ ವರದಭಯಂಗಳಿಂ, ಸರ್ವಾವಯವ ಸಂಯುಕ್ತದಿಂ, ಸರ್ವಲಕ್ಷಣ ಸಂಪತ್ತಿಯಿಂ ಕೂಡಿ ಸರ್ವ ಶತ್ರು ಜಯಕರವಾದಘೋರಬ್ರಹ್ಮಂ ವಿರಾಜಿಕುಂ. ಕುಂಕುಮವರ್ಣ ಚತುರ್ಮುಖದಿಂ, ಚತುರ್ಭುಜದಿಂ, ಜಟಾಮಕುಟದಿಂ, ದ್ವಾದಶನೇತ್ರದಿಂ, ಸರ್ವಾವಯವ ಸಂಯುಕ್ತದಿಂ, ಪೀತಾಂಬರದಿಂ, ಪೀತವಸ್ತ್ರೋತ್ತರೀಯದಿಂ, ಸರ್ವಾಭರಣದಿಂ, ಟಂಕಾಭಯಯುತ ವಾಮಕರಂಗಳಿಂ, ಶೂಲಭಯಾನ್ವಿತ ದಕ್ಷಿಣಹಸ್ತಂಗಳಿಂ, ದಿವ್ಯಗಂಧಾನುಲಿಪ್ತಾಂಗದಿಂ, ದಿವ್ಯಕುಸುಮಂಗಳಿಂ ಸರ್ವ ಸಿದ್ಧಿಪ್ರದವಾದ ತತ್ಪುರುಷಬ್ರಹ್ಮಂ ವಿರಾಜಿಕುಂ. ಸ್ಫಟಿಕವರ್ಣದಿಂ, ಜಟಾಮಕುಟದಿಂ, ಚತುರ್ಮುಖದಿಂ, ದ್ವಾದಶನೇತ್ರದಿಂ, ಚತುರ್ಭುಜದಿಂ, ಸರ್ವಲಕ್ಷಣದಿಂ, ಶುಕ್ಲಾಂಬರದಿಂ, ಶುಕ್ಲವಸ್ತ್ರೋತ್ತರೀಯದಿಂ, ಟಂಕಾಭಯ ಶೂಲವರಾನ್ವಿತ ಕರಚತುಷ್ಪಯದಿಂ, ಸರ್ವಾವಯವ ಸಂಯುತದಿಂ, ಸರ್ವಾಭರಣದಿಂ, ದಿವ್ಯ ಗಂಧ ಮಾಲ್ಯಾದಿಗಳಿಂ ಕೂಡಿ ಸದ್ಯೋಮುಕ್ತಿಪ್ರದಮಾದೀಶಾನಬ್ರಹ್ಮಂ ವಿರಾಜಿಕುಂ. ಇಂತು, ಪಂಚಬ್ರಹ್ಮಾತ್ಮಕಮಾದುದೆ ಸದಾಶಿವತತ್ವವೆಂದು ನಿರೂಪಿಸಿದೆಯಯ್ಯಾ, ಪರಮ ಶಿವಲಿಂಗಯ್ಯ.