Index   ವಚನ - 2    Search  
 
ಶ್ರೀಗುರುಸ್ವಾಮಿ ಕರುಣಿಸಿಕೊಟ್ಟ ಇಷ್ಟಬ್ರಹ್ಮವೇ ಬಸವಣ್ಣನೆನಗೆ. ಆ ಬಸವಣ್ಣನೆ ನವಲಿಂಗಸ್ವರೂಪವಾಗಿಪ್ಪನಯ್ಯ. ಅದು ಹೇಗೆಂದಡೆ- ತನುತ್ರಯಂಗಳಲ್ಲಿ ಇಷ್ಟ ಪ್ರಾಣ ಭಾವವೆಂದು ಇಂದ್ರಿಯಂಗಳಲ್ಲಿ ಆಚಾರಲಿಂಗ ಗುರುಲಿಂಗ ಶಿವಲಿಂಗ ಜಂಗಮಲಿಂಗ ಪ್ರಸಾದಲಿಂಗ ಮಹಾಲಿಂಗವೆನಿಸಿಪ್ಪನಯ್ಯ. ಅದು ಹೇಗೆಂದಡೆ- ನಾಸಿಕದಲ್ಲಿ ಅಂಗಲಿಂಗಸಂಗ ಚತುರ್ವಿಂಶತಿ ಸ್ವರೂಪನೊಳಕೊಂಡು ಆಚಾರಲಿಂಗವಾಗಿ ಎನ್ನ ನಾಸಿಕದಲ್ಲಿ ಇಂಬುಗೊಂಡನಯ್ಯ ಬಸವಣ್ಣ. ಜಿಹ್ವೆಯಲ್ಲಿ ಅಂಗಲಿಂಗಸಂಗ ಅಷ್ಟಾದಶ ಸ್ವರೂಪನೊಳಕೊಂಡು ಗುರುಲಿಂಗವಾಗಿ ಎನ್ನ ಜಿಹ್ವೆಯಲ್ಲಿ ಇಂಬುಗೊಂಡನಯ್ಯ ಬಸವಣ್ಣ. ನೇತ್ರದಲ್ಲಿ ಅಂಗಲಿಂಗಸಂಗ ಷೋಡಶ ಸ್ವರೂಪನೊಳಕೊಂಡು ಶಿವಲಿಂಗವಾಗಿ ಎನ್ನ ನೇತ್ರದಲ್ಲಿ ಇಂಬುಗೊಂಡನಯ್ಯ ಬಸವಣ್ಣ. ತ್ವಕ್ಕಿನಲ್ಲಿ ಅಂಗಲಿಂಗಸಂಗ ಸಪ್ತಾದಶ ಸ್ವರೂಪನೊಳಕೊಂಡು ಜಂಗಮಲಿಂಗವಾಗಿ ಎನ್ನ ತ್ವಕ್ಕಿನಲ್ಲಿ ಇಂಬುಗೊಂಡನಯ್ಯ ಬಸವಣ್ಣ. ಶ್ರೋತ್ರದಲ್ಲಿ ಅಂಗಲಿಂಗಸಂಗ ತ್ರೈದಶ ಸ್ವರೂಪನೊಳಕೊಂಡು ಪ್ರಸಾದಲಿಂಗವಾಗಿ ಎನ್ನ ಶ್ರೋತ್ರದಲ್ಲಿ ಇಂಬುಗೊಂಡನಯ್ಯ ಬಸವಣ್ಣ. ಹೃದಯದಲ್ಲಿ ಅಂಗಲಿಂಗಸಂಗ ತ್ರಯೋದಶ ಸ್ವರೂಪವನೊಳಕೊಂಡು ಮಹಾಲಿಂಗವಾಗಿ ಎನ್ನ ಹೃದಯದಲ್ಲಿ ಇಂಬುಗೊಂಡನಯ್ಯ ಬಸವಣ್ಣ. ಇಂತೀ ಬಸವಣ್ಣನೆ ಅಂಗ ಲಿಂಗ ಹಸ್ತ ಮುಖ ಶಕ್ತಿ ಭಕ್ತಿ ಪದಾರ್ಥ ಪ್ರಸಾದ. ಇಂತಿವನರಿದು ಅರ್ಪಿಸಿದೆನಾಗಿ ಎನ್ನ ತನುವಿನಲ್ಲಿ ಶುದ್ಧಪ್ರಸಾದವಾಗಿ ಇಂಬುಗೊಂಡನಯ್ಯ ಬಸವಣ್ಣ. ಎನ್ನ ಮನದಲ್ಲಿ ಸಿದ್ಧಪ್ರಸಾದವಾಗಿ ಇಂಬುಗೊಂಡನಯ್ಯ ಬಸವಣ್ಣ. ಎನ್ನ ಪ್ರಾಣದಲ್ಲಿ ಪ್ರಸಿದ್ಧಪ್ರಸಾದವಾಗಿ ಇಂಬುಗೊಂಡನಯ್ಯ ಬಸವಣ್ಣ. ಇಂತೀ ಶುದ್ಧಸಿದ್ಧಪ್ರಸಿದ್ಧ ಪ್ರಸಾದದೊಳಗೆ ಮುಳುಗಿದ್ದ ಭೇದವನರಿದು ಬೋಳಬಸವೇಶ್ವರನ ಅನುಭಾವ ಸಂಪರ್ಕದಿಂದ ಸಿದ್ಧೇಶ್ವರನ ಘನಪ್ರಕಾಶ ಸಾಧ್ಯವಾಯಿತ್ತಾಗಿ ಪರಂಜ್ಯೋತಿ ಮಹಾಲಿಂಗಗುರು ಸಿದ್ದಲಿಂಗ ಪ್ರಭುವಿನಲ್ಲಿ ಎರಡರಿಯದಿರ್ದೆನಯ್ಯ ನಿಮ್ಮ ಧರ್ಮ ನಿಮ್ಮ ಧರ್ಮ.