Index   ವಚನ - 4    Search  
 
ಸದ್ಗುರುಸ್ವಾಮಿ ಕೃಪೆ ಮಾಡಿ ಕೊಟ್ಟ ಪಂಚಾಕ್ಷರ ಷಡಾಕ್ಷರ ಏಕಾಕ್ಷರವೆ ಎನಗೆ ಇಷ್ಟ ಪ್ರಾಣ ಭಾವ. ಇಷ್ಟವೆ ಬಸವಣ್ಣ. ಪ್ರಾಣವೆ ಚೆನ್ನಬಸವಣ್ಣ. ಭಾವವೆ ಪ್ರಭುದೇವರು. ಅದು ಹೇಗೆಂದಡೆ: ಸಾಕಾರ ಮೂರು ಮೂವತ್ತೊಂದು ಪ್ರಕಾರವನೊಳಕೊಂಡು ಎನ್ನ ಕಾಯದಲ್ಲಿ ಸಂಗವಾದನಯ್ಯ ಚೆನ್ನಬಸವಣ್ಣ. ನಿರಾಕಾರ ಮೂರು ಹದಿಮೂರು ಪ್ರಕಾರವನೊಳಕೊಂಡು ಎನ್ನ ಪ್ರಾಣದಲ್ಲಿ ಸಂಗವಾದನಯ್ಯ ಚೆನ್ನಬಸವಣ್ಣ. ನಿಃಕಲ ನಿರವಯ ಚಿದದ್ವಯ ಜಂಗಮವೆ ಎನ್ನ ಇಂದ್ರಿಯಂಗಳಲ್ಲಿ ಸಂಗವಾದನಯ್ಯ ಪ್ರಭುದೇವರು. ಅದು ಹೇಗೆಂದಡೆ: ಅಂಗ ಪ್ರಾಣ ಇಂದ್ರಿಯಂಗಳೆ ಗುರು ಲಿಂಗ ಜಂಗಮ. ಆ ಗುರು ಲಿಂಗ ಜಂಗಮವೆ ಗೋಳಕ ಗೋಮುಖ ವೃತ್ತಾಕಾರ. ಅದು ಹೇಗೆಂದಡೆ: ಗುರುಲಿಂಗ ತ್ರಿವಿಧವನೊಳಕೊಂಡು ಎನ್ನ ಅಂಗದಲ್ಲಿ ಸಂಗವಾದನಯ್ಯ ಬಸವಣ್ಣ ಶಿವಲಿಂಗ ತ್ರಿವಿಧವನೊಳಕೊಂಡು ಎನ್ನ ಪ್ರಾಣದಲ್ಲಿ ಸಂಗವಾದನಯ್ಯ ಚೆನ್ನಬಸವಣ್ಣ. ಜಂಗಮಲಿಂಗ ತ್ರಿವಿಧವನೊಳಕೊಂಡು ಎನ್ನ ಇಂದ್ರಿಯಂಗಳಲ್ಲಿ ಸಂಗವಾದನಯ್ಯ ಪ್ರಭುದೇವರು. ಆಗಮಲಿಂಗ ತ್ರಿವಿಧವನೊಳಕೊಂಡು ಎನ್ನ ಪ್ರಾಣದಲ್ಲಿ ಸಂಗವಾದನಯ್ಯ ಚೆನ್ನಬಸವಣ್ಣ. ಕಾಯಲಿಂಗ ತ್ರಿವಿಧವನೊಳಕೊಂಡು ಎನ್ನ ಅಂಗದಲ್ಲಿ ಸಂಗವಾದನಯ್ಯ ಬಸವಣ್ಣ. ಆಚಾರಲಿಂಗ ತ್ರಿವಿಧವನೊಳಕೊಂಡು ಎನ್ನ ಇಂದ್ರಿಯಂಗಳಲ್ಲಿ ಸಂಗವಾದನಯ್ಯ ಪ್ರಭುದೇವರು. ಅನುಗ್ರಹಲಿಂಗ ತ್ರಿವಿಧವನೊಳಕೊಂಡು ಎನ್ನ ಅಂಗದಲ್ಲಿ ಸಂಗವಾದನಯ್ಯ ಬಸವಣ್ಣ. ಅರ್ಪಿತಲಿಂಗ ತ್ರಿವಿಧವನೊಳಕೊಂಡು ಎನ್ನ ಪ್ರಾಣದಲ್ಲಿ ಸಂಗವಾದನಯ್ಯ ಚೆನ್ನಬಸವಣ್ಣ. ತನುಗುಣಲಿಂಗ ತ್ರಿವಿಧವನೊಳಕೊಂಡು ಎನ್ನ ಇಂದ್ರಿಯಂಗಳಲ್ಲಿ ಸಂಗವಾದನಯ್ಯ ಪ್ರಭುದೇವರು. ಒಲವುಲಿಂಗ ತ್ರಿವಿಧವನೊಳಕೊಂಡು ಎನ್ನ ಪ್ರಾಣದಲ್ಲಿ ಸಂಗವಾದನಯ್ಯ ಚೆನ್ನಬಸವಣ್ಣ. ನಿರೂಪುಲಿಂಗ ತ್ರಿವಿಧವನೊಳಕೊಂಡು ಎನ್ನ ಪ್ರಾಣದಲ್ಲಿ ಸಂಗವಾದನಯ್ಯ ಚೆನ್ನಬಸವಣ್ಣ. ಪ್ರಸಾದಲಿಂಗ ತ್ರಿವಿಧವನೊಳಕೊಂಡು ಎನ್ನ ಇಂದ್ರಿಯಂಗಳಲ್ಲಿ ಸಂಗವಾದನಯ್ಯ ಪ್ರಭುದೇವರು. ಪಾದೋದಕಲಿಂಗ ತ್ರಿವಿಧವನೊಳಕೊಂಡು ಎನ್ನ ಪ್ರಾಣದಲ್ಲಿ ಸಂಗವಾದನಯ್ಯ ಚೆನ್ನಬಸವಣ್ಣ. ನಿಃಪತಿಲಿಂಗ ತ್ರಿವಿಧವನೊಳಕೊಂಡು ಎನ್ನ ಅಂಗದಲ್ಲಿ ಸಂಗವಾದನಯ್ಯ ಬಸವಣ್ಣ. ಆಕಾಶಲಿಂಗ ತ್ರಿವಿಧವನೊಳಕೊಂಡು ಎನ್ನ ಇಂದ್ರಿಯಂಗಳಲ್ಲಿ ಸಂಗವಾದನಯ್ಯ ಪ್ರಭುದೇವರು. ಪ್ರಕಾಶಲಿಂಗ ತ್ರಿವಿಧವನೊಳಕೊಂಡು ಎನ್ನ ಇಂದ್ರಿಯಂಗಳಲ್ಲಿ ಸಂಗವಾದನಯ್ಯ ಪ್ರಭುದೇವರು. ಕೊಂಡುದು ಪ್ರಸಾದ, ನಿಂದುದೋಗರ, ಚರಾಚರ ನಾಸ್ತಿ ಎಂಬ ತ್ರಿವಿಧವನೊಳಕೊಂಡು ಎನ್ನ ಪ್ರಾಣದಲ್ಲಿ ಸಂಗವಾದನಯ್ಯ ಚೆನ್ನಬಸವಣ್ಣ. ಭಾಂಡ ಭಾಜನ ಅಂಗಲೇಪನವೆಂಬ ತ್ರಿವಿಧವನೊಳಕೊಂಡು ಎನ್ನ ಅಂಗದಲ್ಲಿ ಸಂಗವಾದನಯ್ಯ ಬಸವಣ್ಣ. ಈ ಗುರು ಲಿಂಗ ಜಂಗಮದೇಕಾರ್ಥ ಸಚ್ಚಿದಾನಂದ ಬ್ರಹ್ಮವು ಆ ಸಚ್ಚಿದಾನಂದ ಬ್ರಹ್ಮವೇ ಸಿದ್ಧೇಶ್ವರನು. ಆ ಸಿದ್ಧೇಶ್ವರನೆ ಪಿಂಡ ಬ್ರಹ್ಮಾಂಡದೊಳಹೊರಗೆ ಪರಿಪೂರ್ಣವಾಗಿ ತೋರುವ ಭೇದವನು ಬೋಳಬಸವೇಶ್ವರನು ಎನ್ನ ಅಂತರಂಗ ಬಹಿರಂಗ ಎಡಬಲ ಹಿಂದು ಮುಂದು ಅಡಿ ಆಕಾಶ ತತ್ಪರಿಪೂರ್ಣ ಸಮರಸೈಕ್ಯ ಏಕಾರ್ಥವ ಮಾಡಿಕೊಟ್ಟ ಕಾರಣ ಪರಂಜ್ಯೋತಿ ಮಹಾಲಿಂಗಗುರು ಸಿದ್ಧಲಿಂಗಪ್ರಭುವಿನಲ್ಲಿ ವಾಯುವನಪ್ಪಿದ ಪರಿಮಳದಂತೆ ಅಂಬುಧಿಯೊಳಗೆ ಬಿದ್ದ ವಾರಿಕಲ್ಲಿನಂತೆ ಉರಿಯುಂಡ ಕರ್ಪೂರದಂತಾದೆನಯ್ಯ, ನಿಮ್ಮ ಧರ್ಮ ನಿಮ್ಮ ಧರ್ಮ.