Index   ವಚನ - 6    Search  
 
ಎನ್ನ ಉನ್ಮನಿಯ ತತ್ವದ ಮೇಲೆ ತಳತಳನೆ ಹೊಳೆವುತ್ತಿಹ ಚಿತ್ಪೂರ್ಣ ಚಿತ್ಪ್ರಕಾಶ ಚಿತ್ಪರಮಲಿಂಗವನು ಮೆಲ್ಲ ಮೆಲ್ಲನೆ ಎನ್ನ ಭಾವಸ್ಥಲದಲ್ಲಿತಂದು ಇಂಬಿಟ್ಟನಯ್ಯ ಶ್ರೀಗುರು. ಎನ್ನ ಭಾವಸ್ಥಲದಲ್ಲಿ ತಳತಳನೆ ಹೊಳವುತ್ತಿಹ ಚಿತ್ಪೂರ್ಣ ಚಿತ್ಪ್ರಕಾಶ ಚಿತ್ಕಲಾಲಿಂಗವನು ಎನ್ನ ಆತ್ಮಸ್ಥಲದಲ್ಲಿ ಮೆಲ್ಲನೆ ತಂದು ನ್ಯಸ್ತವ ಮಾಡಿದನಯ್ಯ ಶ್ರೀಗುರು. ಎನ್ನ ಆತ್ಮಸ್ಥಲದಲ್ಲಿ ತಳತಳನೆ ಹೊಳವುತ್ತಿಹ ಚಿತ್ಪೂರ್ಣ ಚಿತ್ಪ್ರಕಾಶ ಚಿದಾನಂದಲಿಂಗವನು ಮೆಲ್ಲಮೆಲ್ಲನೆ ಎನ್ನ ಆಕಾಶತತ್ವದಲ್ಲಿ ಸ್ಥಾಪ್ಯವ ಮಾಡಿದನಯ್ಯ ಶ್ರೀಗುರು. ಎನ್ನ ಆಕಾಶತತ್ವದಲ್ಲಿ ತಳತಳನೆ ಹೊಳವುತ್ತಿಹ ಚಿತ್ಪೂರ್ಣ ಚಿತ್ಪ್ರಕಾಶ ಚಿನ್ಮಯಲಿಂಗವನು ಮೆಲ್ಲಮೆಲ್ಲನೆ ಎನ್ನ ವಾಯುತತ್ವದಲ್ಲಿ ನ್ಯಸ್ತವ ಮಾಡಿದನಯ್ಯ ಶ್ರೀಗುರು. ಎನ್ನ ವಾಯುತತ್ವದಲ್ಲಿ ತಳತಳನೆ ಹೊಳವುತ್ತಿಹ ಚಿತ್ಪೂರ್ಣ ಚಿತ್ಪ್ರಕಾಶ ಚಿನ್ಮೂರ್ತಿಲಿಂಗವನು ಮೆಲ್ಲಮೆಲ್ಲನೆ ಎನ್ನ ಅಗ್ನಿತತ್ವದಲ್ಲಿ ಅನುಗೊಳಿಸಿದನಯ್ಯ ಶ್ರೀಗುರು. ಎನ್ನ ಅಗ್ನಿತತ್ವದಲ್ಲಿ ತಳತಳನೆ ಹೊಳವುತ್ತಿಹ ಚಿತ್ಪೂರ್ಣ ಚಿತ್ಪ್ರಕಾಶ ಚಿಲ್ಲಿಂಗವನು ಮೆಲ್ಲಮೆಲ್ಲನೆ ಎನ್ನ ಅಪ್ಪುತತ್ವದಲ್ಲಿ ನೆಲೆಗೊಳಿಸಿದನಯ್ಯ ಶ್ರೀಗುರು. ಎನ್ನ ಅಪ್ಪುತತ್ವದಲ್ಲಿ ತಳತಳನೆ ಹೊಳವುತ್ತಿಹ ಚಿತ್ಪೂರ್ಣ ಚಿತ್ಪ್ರಕಾಶ ಚಿದ್ರೂಪಲಿಂಗವನು ಮೆಲ್ಲಮೆಲ್ಲನೆ ಎನ್ನ ಪೃಥ್ವಿತತ್ವದಲ್ಲಿ ಹುದುಗೊಳಿಸಿದನಯ್ಯ ಶ್ರೀಗುರು. ಎನ್ನ ಪೃಥ್ವಿತತ್ವದಲ್ಲಿ ತಳತಳನೆ ಹೊಳವುತ್ತಿಹ ಚಿತ್ಪೂರ್ಣ ಚಿತ್ಪ್ರಕಾಶ ಚಿದದ್ವಯಲಿಂಗವನು ಎನ್ನ ಭಾವ ಮನ ದೃಕ್ಕಿಗೆ ಕರತಳಾಮಳಕವಾಗಿ ಎನ್ನ ಕರಸ್ಥಲದಲ್ಲಿ ಮೂರ್ತಗೊಳಿಸಿದನಯ್ಯ ಶ್ರೀಗುರು. ಎನ್ನ ಕರಸ್ಥಲದಲ್ಲಿ ಮೂರ್ತಿಗೊಂಡ ಇಷ್ಟಬ್ರಹ್ಮವೆ ಬಸವಣ್ಣನೆನಗೆ. ಆ ಬಸವಣ್ಣನೆ ಎನ್ನ ಆಧಾರಚಕ್ರದಲ್ಲಿ ಆಚಾರಲಿಂಗವಾಗಿ ಮೂರ್ತಿಗೊಂಡನಯ್ಯ ಬಸವಣ್ಣ. ಎನ್ನ ಸ್ವಾಧಿಷ್ಠಾನಚಕ್ರದಲ್ಲಿ ಗುರುಲಿಂಗವಾಗಿ ಮೂರ್ತಿಗೊಂಡನಯ್ಯ ಬಸವಣ್ಣ. ಎನ್ನ ಮಣಿಪೂರಕಚಕ್ರದಲ್ಲಿ ಶಿವಲಿಂಗವಾಗಿ ಮೂರ್ತಿಗೊಂಡನಯ್ಯ ಬಸವಣ್ಣ. ಎನ್ನ ಅನಾಹತಚಕ್ರದಲ್ಲಿ ಜಂಗಮಲಿಂಗವಾಗಿ ಮೂರ್ತಿಗೊಂಡನಯ್ಯ ಬಸವಣ್ಣ. ಎನ್ನ ವಿಶುದ್ಧಿಚಕ್ರದಲ್ಲಿ ಪ್ರಸಾದಲಿಂಗವಾಗಿ ಮೂರ್ತಿಗೊಂಡನಯ್ಯ ಬಸವಣ್ಣ. ಎನ್ನ ಆಜ್ಞಾಚಕ್ರದಲ್ಲಿ ಮಹಾಲಿಂಗವಾಗಿ ಮೂರ್ತಿಗೊಂಡನಯ್ಯ ಬಸವಣ್ಣ. ಎನ್ನ ಬ್ರಹ್ಮರಂಧ್ರದಲ್ಲಿ ನಿಃಕಲಿಲಿಂಗವಾಗಿ ಮೂರ್ತಿಗೊಂಡನಯ್ಯ ಬಸವಣ್ಣ. ಎನ್ನ ಶಿಖಾಚಕ್ರದಲ್ಲಿ ಶೂನ್ಯಲಿಂಗವಾಗಿ ಮೂರ್ತಿಗೊಂಡನಯ್ಯ ಬಸವಣ್ಣ. ಎನ್ನ ಪಶ್ಚಿಮಚಕ್ರದಲ್ಲಿ ನಿರಂಜನಲಿಂಗವಾಗಿ ಮೂರ್ತಿಗೊಂಡನಯ್ಯ ಬಸವಣ್ಣ. ಎನ್ನ ಸ್ಥೂಲಾಂಗದಲ್ಲಿ ಇಷ್ಟಲಿಂಗವಾಗಿ ಮೂರ್ತಿಗೊಂಡನಯ್ಯ ಬಸವಣ್ಣ. ಎನ್ನ ಸೂಕ್ಷ್ಮಾಂಗದಲ್ಲಿ ಪ್ರಾಣಲಿಂಗವಾಗಿ ಮೂರ್ತಿಗೊಂಡನಯ್ಯ ಬಸವಣ್ಣ. ಎನ್ನ ಕಾರಣಾಂಗದಲ್ಲಿ ಭಾವಲಿಂಗವಾಗಿ ಮೂರ್ತಿಗೊಂಡನಯ್ಯ ಬಸವಣ್ಣ. ಎನ್ನ ನಾಸಿಕದಲ್ಲಿ ಆಚಾರಲಿಂಗವಾಗಿ ಮೂರ್ತಿಗೊಂಡನಯ್ಯ ಬಸವಣ್ಣ. ಎನ್ನ ಜಿಹ್ವೆಯಲ್ಲಿ ಗುರುಲಿಂಗವಾಗಿ ಮೂರ್ತಿಗೊಂಡನಯ್ಯ ಬಸವಣ್ಣ. ಎನ್ನ ದೃಕ್ಕಿನಲ್ಲಿ ಶಿವಲಿಂಗವಾಗಿ ಮೂರ್ತಿಗೊಂಡನಯ್ಯ ಬಸವಣ್ಣ. ಎನ್ನ ತ್ವಕ್ಕಿನಲ್ಲಿ ಜಂಗಮಲಿಂಗವಾಗಿ ಮೂರ್ತಿಗೊಂಡನಯ್ಯ ಬಸವಣ್ಣ. ಎನ್ನ ಶ್ರೋತ್ರದಲ್ಲಿ ಪ್ರಸಾದಲಿಂಗವಾಗಿ ಮೂರ್ತಿಗೊಂಡನಯ್ಯ ಬಸವಣ್ಣ. ಎನ್ನ ಹೃದಯದಲ್ಲಿ ಮಹಾಲಿಂಗವಾಗಿ ಮೂರ್ತಿಗೊಂಡನಯ್ಯ ಬಸವಣ್ಣ ಎನ್ನ ಪೃಥ್ವಿಸಂಬಂಧವಾದ ಅಷ್ಟಾದಶ ಪದಾರ್ಥಂಗಳ ಕೈಕೊಂಡು ಆಚಾರಲಿಂಗವಾಗಿ ಎನ್ನ ಭಕ್ತಸ್ಥಲದಲ್ಲಿ ಮೂರ್ತಿಗೊಂಡನಯ್ಯ ಬಸವಣ್ಣ. ಎನ್ನ ಅಪ್ಪುಸಂಬಂಧವಾದ ಅಷ್ಟಾದಶ ಪದಾರ್ಥಂಗಳ ಕೈಕೊಂಡು ಗುರುಲಿಂಗವಾಗಿ ಎನ್ನ ಮಾಹೇಶ್ವರಸ್ಥಲದಲ್ಲಿ ಮೂರ್ತಿಗೊಂಡನಯ್ಯ ಬಸವಣ್ಣ. ಎನ್ನ ಅಗ್ನಿಸಂಬಂಧವಾದ ಅಷ್ಟಾದಶಪದಾರ್ಥಂಗಳ ಕೈಕೊಂಡು ಶಿವಲಿಂಗವಾಗಿ ಎನ್ನ ಪ್ರಸಾದಿಸ್ಥಲದಲ್ಲಿ ಮೂರ್ತಿಗೊಂಡನಯ್ಯ ಬಸವಣ್ಣ. ಎನ್ನ ವಾಯುಸಂಬಂಧವಾದ ಅಷ್ಟಾದಶಪದಾರ್ಥಂಗಳ ಕೈಕೊಂಡು ಜಂಗಮಲಿಂಗವಾಗಿ ಎನ್ನ ಪ್ರಾಣಲಿಂಗಿಸ್ಥಲದಲ್ಲಿ ಮೂರ್ತಿಗೊಂಡನಯ್ಯ ಬಸವಣ್ಣ. ಎನ್ನ ಆಕಾಶಸಂಬಂಧವಾದ ಅಷ್ಟಾದಶಪದಾರ್ಥಂಗಳ ಕೈಕೊಂಡು ಪ್ರಸಾದಲಿಂಗವಾಗಿ ಎನ್ನ ಶರಣಸ್ಥಲದಲ್ಲಿ ಮೂರ್ತಿಗೊಂಡನಯ್ಯ ಬಸವಣ್ಣ. ಎನ್ನ ಆತ್ಮ ಸಂಬಂಧವಾದ ಅಷ್ಟಾದಶಪದಾರ್ಥಂಗಳ ಕೈಕೊಂಡು ಮಹಾಲಿಂಗವಾಗಿ ಎನ್ನ ಐಕ್ಯದಲ್ಲಿ ಮೂರ್ತಿಗೊಂಡನಯ್ಯ ಬಸವಣ್ಣ. ಇಂತೀ ನಾನಾವಿಧ ಪ್ರಕಾರವನೊಳಕೊಂಡು ಬಸವಣ್ಣನೆ ಇಷ್ಟಬ್ರಹ್ಮವೆನೆಗೆ.ಆ ಇಷ್ಟಬ್ರಹ್ಮವೆ ಎನ್ನ ಅಂಗ ಮನ ಪ್ರಾಣ ಇಂದ್ರಿಯ ಸಕಲ ಕರಣಂಗಳ ಕೊನೆಯ ಮೊನೆಯ ಮೇಲೆ ತಳತಳನೆ ಬೆಳಗುತ್ತಿಪ್ಪ ಭೇದವನು ಸಿದ್ಧೇಶ್ವರನೆನಗೆ ಅರುಹಿದ ಕಾರಣ ಪರಂಜ್ಯೋತಿ ಮಹಾಲಿಂಗಗುರು ಸಿದ್ಧಲಿಂಗಪ್ರಭುವಿನಲ್ಲಿ ಉರಿಯುಂಡ ಕರ್ಪುರದಂತಾದೆನಯ್ಯಾ, ಬೋಳಬಸವೇಶ್ವರ ನಿಮ್ಮ ಧರ್ಮ ನಿಮ್ಮ ಧರ್ಮ.