ಎನ್ನ ಕಂಗಳ ದೃಕ್ಕಿನಲ್ಲಿ ಅಂಗ ಲಿಂಗ ಸಂಗ
ನಾಲ್ವತ್ತೆರಡು ಭೇದವನೊಳಕೊಂಡು
ಎನ್ನ ಕಾಯದ ಕರಸ್ಥಲದಲ್ಲಿ ಮೂರ್ತಿಗೊಂಡನಯ್ಯ ಬಸವಣ್ಣನು.
ಎನ್ನ ಮನೋದೃಕ್ಕಿನಲ್ಲಿ ಅಂಗ ಲಿಂಗ ಸಂಗ
ಮೂವತ್ತಮೂರು ಭೇದವನೊಳಕೊಂಡು
ಎನ್ನ ಮನದ ಕರಸ್ಥಲದಲ್ಲಿ ಮೂರ್ತಿಗೊಂಡನಯ್ಯ ಬಸವಣ್ಣನು.
ಎನ್ನ ಭಾವದ ದೃಕ್ಕಿನಲ್ಲಿ ಅಂಗ ಲಿಂಗ ಸಂಗ
ಷಡುವಿಂಶತಿ ಸ್ವರೂಪವನೊಳಕೊಂಡು
ಎನ್ನ ಭಾವದ ಕರಸ್ಥಲದಲ್ಲಿ ಮೂರ್ತಿಗೊಂಡನಯ್ಯ.ಪ್ರಭುದೇವರು.
ಇಂತೀ ಮೂವರು ಒಂದೊಂದನಳವಡಿಸಿಕೊಂಡ ಕಾರಣ
ಎನಗೇನೂಯಿಲ್ಲದೆ ಪರಂಜ್ಯೋತಿ
ಮಹಾಲಿಂಗ ಗುರು ಸಿದ್ಧಲಿಂಗ ಪ್ರಭುವಿನಲ್ಲಿ
ಸಿದ್ಧೇಶ್ವರನ ನಿಜಪದವ ಬೆರಸಿ ಮನಮಗ್ನವಾಗಿರ್ದೆನಯ್ಯ,
ಬೋಳಬಸವೇಶ್ವರ ನಿಮ್ಮ ಧರ್ಮ ನಿಮ್ಮ ಧರ್ಮ.