ಎನ್ನ ದ್ವಿವಿಧಾಕ್ಷರದಲ್ಲಿ ಲಿಂಗ ಸ್ವರೂಪಾಗಿ ಬಂದು
ಮೂರ್ತಿಗೊಂಡನಯ್ಯ ಬಸವಣ್ಣ.
ಎನ್ನ ತ್ರಿವಿಧಾಕ್ಷರದಲ್ಲಿ ಜಂಗಮಲಿಂಗ ಸ್ವರೂಪಾಗಿ ಬಂದು
ಮೂರ್ತಿಗೊಂಡನಯ್ಯ ಬಸವಣ್ಣ.
ಇಂತೀ ದ್ವಿವಿಧಾಕ್ಷರ ತ್ರಿವಿಧಾಕ್ಷರವೇ ಅಂಗ ಪ್ರಾಣ.
ಆ ಅಂಗ ಪ್ರಾಣವೇ ಉಭಯಸ್ಥಲ.
ಆ ಉಭಯಸ್ಥಲದ ಭೇದವನು ದ್ವೈತಾದ್ವೈತಿಗಳೆತ್ತ ಬಲ್ಲರಯ್ಯ?
ಇದನರಿದು ಸಿದ್ಧೇಶ್ವರನು ಅಂಗ ಪ್ರಾಣದಲ್ಲಿ ಲಿಂಗ ಜಂಗಮವ
ಏಕಾರ್ಥವ ಮಾಡಿ ತೋರಿಸಿಕೊಟ್ಟ ಕಾರಣ,
ಪರಂಜ್ಯೋತಿ ಮಹಾಲಿಂಗಗುರು ಸಿದ್ಧಲಿಂಗ ಪ್ರಭುವಿನಲ್ಲಿ
ಅರ್ಕನ ಪ್ರಭೆಯೊಳಕೊಂಡ ಅರಿಸಿನದಂತಾದೆನಯ್ಯ,
ಬೋಳಬಸವೇಶ್ವರ ನಿಮ್ಮ ಧರ್ಮ ನಿಮ್ಮ ಧರ್ಮ.