ಎಲೆ ತಂಗಿ
ಶರಣಸತಿ ಲಿಂಗಪತಿಯಾದ ಪತಿವ್ರತಾಭಾವದ ಚಿಹ್ನೆ
ನಿನ್ನ ನಡೆ ನುಡಿಯಲ್ಲಿ ಹೊಗರುದೋರುತ್ತಿದೆ
ನಿನ್ನ ಪೂರ್ವಾಪರವಾವುದಮ್ಮ?
ಸುತ್ತೂರು ಸಿಂಹಾಸನದ ಪರ್ವತದೇವರ ಶಿಷ್ಯರು
ಭಂಡಾರಿ ಬಸವಪ್ಪೊಡೆಯ ದೇವರು.
ಆ ಭಂಡಾರಿ ಬಸವಪ್ಪೊಡೆಯದೇವರ ಶಿಷ್ಯರು
ಕೂಗಲೂರು ನಂಜಯ್ಯದೇವರು.
ಆ ನಂಜಯ್ಯದೇವರ ಕರಕಮಲದಲ್ಲಿ
ಉದಯವಾದ ಶರಣವೆಣ್ಣಯ್ಯಾ ನಾನು.
ಎನ್ನ ಗುರುವಿನ ಗುರು ಪರಮಗುರು
ಪರಮಾರಾಧ್ಯ ತೋಂಟದಾರ್ಯನಿಗೆ
ಗುರುಭಕ್ತಿಯಿಂದೆನ್ನ ಶರಣುಮಾಡಿದರು.
ಆ ತೋಂಟದಾರ್ಯನು
ತನ್ನ ಕೃಪೆಯೆಂಬ ತೊಟ್ಟಿಲೊಳಗೆನ್ನಂ ಮಲಗಿಸಿ
ಪ್ರಮಥಗಣಂಗಳ
ವಚನಸ್ವರೂಪ ತತ್ವಾರ್ಥವೆಂಬ ಹಾಲು ತುಪ್ಪಮಂ
ಸದಾ ದಣಿಯಲೆರೆದು ಅಕ್ಕರಿಂದ ರಕ್ಷಣೆಯಂ ಮಾಡಿ
"ಘನಲಿಂಗಿ" ಎಂಬ ನಾಮಕರಣಮಂ ಕೊಟ್ಟು
ಪ್ರಾಯಸಮರ್ಥೆಯಂ ಮಾಡಿ
ಸತ್ಯಸದಾಚಾರ ಜ್ಞಾನಕ್ರಿಯೆಗಳೆಂಬ ದಿವ್ಯಾಭರಣಂಗಳಂ ತೊಡಿಸಿ
ಅರುಹೆಂಬ ಬಣ್ಣವ ನಿರಿವಿಡಿದುಡಿಸಿ
ಅರ್ತಿಯ ಮಾಡುತ್ತಿಪ್ಪ ಸಮಯದಲ್ಲಿ
ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನ
ತನಗೆ ನಾನಾಗಬೇಕೆಂದು ಬೇಡಿಕಳುಹಲು
ಎಮ್ಮವರು ಅವಂಗೆ ಮಾತನಿಕ್ಕಿದರಮ್ಮಾ.