Index   ವಚನ - 24    Search  
 
ಲಿಂಗಾಂಗ ಸಂಬಂಧದ ಭೇದವನರಿಯದೆ ನಾವು ಲಿಂಗಾಗಿಸಂಬಂಧಿಗಳೆಂದು ಅಂದಚಂದವಾಗಿ ನುಡಿದುಕೊಂಬ ಕ್ರಿಯಾಭ್ರಾಂತರು ನೀವು ಕೇಳಿರೋ ಲಿಂಗಾಂಗ ಸಂಬಂಧದ ಉತ್ತರೋತ್ತರದ ನಿರ್ಣಯವ. ಹೊರಗಣ ಹೂವನ್ನೆ ತಂದು ಸ್ಥೂಲತನುವಿನ ಮೇಲಿಪ್ಪ ಆಚಾರಲಿಂಗಮಂ ಪೂಜೆಮಾಡಿ ತನುವ ಸಮರ್ಪಿಸಿ ಬೇಡಿಕೊಂಡು ಹೊರಗಣ ಹೊನ್ನು ಹೆಣ್ಣು ಮಣ್ಣು ಷಟ್ಕರ್ಮಂಗಳ ಬಿಟ್ಟುದೇ ಇಷ್ಟಲಿಂಗಪೂಜೆ. ಒಳಗಣ ಹೂವನ್ನೆ ತಂದು ಸೂಕ್ಷ್ಮತನುವಿನ ಮೇಲಿಪ್ಪ ಜಂಗಮಲಿಂಗಮಂ ಪೂಜೆಮಾಡಿ ಮನವ ಸಮರ್ಪಿಸಿ ಉಪಾವಸ್ಥೆಯಂ ಮಾಡಿ ಒಳಗಣ ಅಂತಃಕರಣಂಗಳಂ ಸುಟ್ಟುದೇ ಪ್ರಾಣಲಿಂಗಪೂಜೆ. ಮನೋಮಧ್ಯದೊಳಿಪ್ಪ ಭಾವಪುಷ್ಪವನ್ನೆ ತಂದು ಕಾರಣತನುವಿನ ಮೇಲಿಪ್ಪ ತೃಪ್ತಿಲಿಂಗಮಂ ಪೂಜೆ ಮಾಡಿ ಸಂತೋಷವಂ ಸಮರ್ಪಿಸಿ ದೈನ್ಯಂಬಟ್ಟು ಜ್ಞಾನ ಕ್ರಿಯೆಗಳಳಿದುದೇ ಭಾವಲಿಂಗಪೂಜೆ. ಈ ಪ್ರಕಾರದ ಲಿಂಗಾಂಗ ಸಾಧಕತ್ವಮಂ ಶಿವರಾತ್ರಿಯ ಸಂಕಣ್ಣಂಗೊಲಿದಂತೆ ಎನಗೊಲಿದು ಕರುಣಿಸಯ್ಯ, ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನ.