Index   ವಚನ - 39    Search  
 
ಉಚ್ಚೆಯ ಬಚ್ಚಲ ಹಲವು ಭಗದ ದೇವತೆಯ ಮಾಯೆಯ ಹಾವಳಿಯ ನೋಡಿರಣ್ಣ. ಕರಣಹಸುಗೆಯನೋದುವಣ್ಣಗಳ ಕಾಲ ಹಿಡಿದೆಳೆಯಿತು ಮಾಯೆ. ಮಿಶ್ರಾರ್ಪಣಗಳನೋದುವಣ್ಣಗಳ ಮೀಸೆಯ ಹಿಡಿದುಯ್ಯಾಲೆಯನಾಡಿತು ಮಾಯೆ. ಆತ್ಮನ ಸ್ವರೂಪವನರಿವಣ್ಣಗಳ ತನಗಾಳು ಮಾಡಿತ್ತು ಮಾಯೆ. ಶಿವಜ್ಞಾನವ ಕೀಳುಮಾಡಿ ತತ್ವಸ್ವರೂಪವನರಿವಣ್ಣಗಳ ತನಗೆ ಮುದ್ದು ಮಾಡಿಸಿ ಮೋಹಿಸಿ ಬತ್ತಲೆ ನಿಲಿಸಿತು ಮಾಯೆ. ಮಂತ್ರಗೋಪ್ಯವನೋದುವಣ್ಣಗಳ ಕುಟಿಲವೆಣ್ಣಿನ ಕುಮಂತ್ರಕ್ಕೆ ಸಿಕ್ಕಿಸಿ ಕಾಡಿತು ಮಾಯೆ. ಬರಿಯ ವೈರಾಗ್ಯದ ಮಾಡುವಣ್ಣಗಳ ಸ್ತ್ರೀಯರ ಮುಡಿಯ ಸಿಂಗರಿಸುವಂತೆ ಮಾಡಿತು ಮಾಯೆ. ಜಪಧ್ಯಾನಗಳ ಮಾಡುವಣ್ಣಗಳ ಭಗಧ್ಯಾನವ ಮಾಡಿಸಿತು ಮಾಯೆ. ಲಿಂಗವ ಕರಸ್ಥಲದಲ್ಲಿ ಹಿಡಿದಣ್ಣಗಳ ಅಂಗನೆಯರ ಹಿಂದಣ ಪುಕಳಿಯ ಮುಂದಣ ಯೋನಿಚಕ್ರವ ಮುಟ್ಟಿಸಿ ಮೂಗನರಿಯಿತು ಮಾಯೆ. ಪ್ರಸಾದ ಲೇಹ್ಯವ ಮಾಡುವಣ್ಣಗಳ ಪೊಸಜವ್ವನೆಯರ ತುಟಿಯ ಲೋಳೆಯ ನೆಕ್ಕಿಸಿತು ಮಾಯೆ. ಬೆಡಗಿನ ವಚನವನೋದುವಣ್ಣಗಳ ಸಖಿಯರ ತೊಡೆಯಲ್ಲಿ ಹಾಕಿತು ಮಾಯೆ. ವಚನವನೋದುವಣ್ಣಗಳ ರಚನೆಗೆ ನಿಲಿಸಿತು ಮಾಯೆ. ಇದು ಕಾರಣ, ಇಚ್ಛೆಯ ನುಡಿದು ಕುಚ್ಫಿತನಾಗಿ ಬರಿವಿರಕ್ತನಂತೆ ಹೊಟ್ಟೆಯ ಹೊರೆದು ಹೊನ್ನು ಹೆಣ್ಣು ಮಣ್ಣು ದೊರೆತಲ್ಲಿ ಹಿಡಿದಿಹ ಕರ್ಮಿಯೆಂಬ ಕಾಳಮೂಳರಿಗೆಲ್ಲಿಯದೋ ವಿರಕ್ತಿ? ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನ.