ಮಣ್ಣು ಹಿಡಿದವರೆಲ್ಲರೂ ಬ್ರಹ್ಮನ ಸೃಷ್ಟಿಗೊಳಗಾದರು.
ಹೊನ್ನ ಹಿಡಿದವರೆಲ್ಲರೂ ವಿಷ್ಣುವಿನ ಸ್ಥಿತಿಗೊಳಗಾದರು.
ಹೆಣ್ಣು ಹಿಡಿದವರೆಲ್ಲರೂ ರುದ್ರನ ಸಂಹಾರಕ್ಕೊಳಗಾದರು.
[ಮ]ಣ್ಣು ಹೊನ್ನು[ಹೆ]ಣ್ಣು ಬಿಟ್ಟು
ಲಿಂಗಾಂಗ ಸಂಯೋಗವರಿಯದೆ
ಸದಾಚಾರದಲ್ಲಿ ತಿರಿದುಂಡು ಆತ್ಮಸುಖಿಯಾದವರೆಲ್ಲರೂ
ಫಲಭೋಗಕ್ಕೊಳಗಾದರು.
ನಾನು ಮೂರ ಬಿಟ್ಟು ಆರ ಕಂಡು ಮೂದೇವರ ಗೆಲಿದೆ.
ಆರ ಬಿಟ್ಟು ಮೂರ ಕಂಡು ಮನ ಮುಳುಗಿ
ಮೂರೊಂದು ಪದವ ದಾಂಟಿ ಶಿವನೊಳಗಾದೆನಯ್ಯ
ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನ.