Index   ವಚನ - 47    Search  
 
ಮುಚ್ಚಿ ಮೂದಲಿಸಿ ಮೊನೆಗೆಡಿಸುವ ಮಾಯಾಪ್ರಪಂಚಿನ ಬಲೆಗೆ ಸಿಲುಕದೆ ನಾನು ಧ್ಯಾನ ಮೌನ ಉಪಾವಸ್ಥೆಯಿಂದ ಷಟ್‍ಕೋಣೆಯ ಸುವರ್ಣದ್ವೀಪದ ಅರಸಿನ ಬಲವಿಡಿದು ಪಂಚವಿಂಶತಿತತ್ವಂಗಳೆಂಬ ಮಾಯಾಸುಭಟರ [ಸೂ]ಡಕೊಂದು ಪಂಚಬ್ರಹ್ಮವೇ ಪಂಚಭೂತಂಗಳಾಗಿ ತನುವಿಡಿದು ಲಿಂಗನಿಷ್ಠೆಯಿಂದ ಓಂಕಾರಸ್ವರೂಪವಾಗಿ ಅಹಂಕರಿಸದೆ ದಾಸೋಹಂಭಾವದಿಂದ ತ್ರಿಕೂಟಪರ್ವತಕ್ಕೆ ಪಶ್ಚಿಮದಿಕ್ಕಿನಲ್ಲಿ ಅನಂತ ಕಾರ್ಮುಗಿಲ ಮಿಂಚಿನಂತೆ [ತೋರುತ್ತಿಪ್ಪು]ದೀಗ ಶಾಂಭವದ್ವೀಪ. ಆ ಶಾಂಭವದ್ವೀಪದಲ್ಲಿ ನೆಲಸಿರ್ಪ ನಿರವಯಲ ಬೆಳ್ದಿಂಗಲ ಬೀಜಮಂ ನಾನು ಕಂಡು ಕಂಬನಿದುಂಬಿ ನಮಸ್ಕಾರಮಂ ಮಾಡಿದ ಘನದಿಂದ ಬ್ರಹ್ಮ ವಿಷ್ಣು ರುದ್ರ ಇಂತೀ ಮೂವರಂ ಕೆಡೆಮೆಟ್ಟಿ ಜನನ ಮರಣಂಗಳಂ ಗೆಲಿದು ನಾನು ಹುಟ್ಟುಗೆಟ್ಟೆನಯ್ಯ, ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನ.