Index   ವಚನ - 57    Search  
 
ತಾಪತ್ರಯಂಗಳಿಗೆನ್ನನು ಒಳಗುಮಾಡುವ ಕರ್ಮತ್ರಯಂಗಳು ಕೆಟ್ಟಕೇಡ ನೋಡಾ ಎಲೆ ತಂಗಿ. ಕಾಯದ ಕಳವಳಕಂಜಿ ಸಂಚನ ಮಡಗುವ ಹೊನ್ನ ಬಿಟ್ಟಲ್ಲಿಯೇ ಸಂಚಿತಕರ್ಮ ನಾಸ್ತಿಯಾಯಿತು. ಬಂದುದು ಮೊದಲಾಗಿ ಆಗಾಗಲೇ ಅನುಭವಿಸಿ ಲಬ್ಧವನುಳಿಯಲೀಯದೆ ಭೋಗವನುಂಬ ಹೆಣ್ಣ ಬಿಟ್ಟಲ್ಲಿಯೇ ಪ್ರಾರಬ್ಧಕರ್ಮ ನಾಸ್ತಿಯಾಯಿತು. ಇಂದು ಬಿತ್ತಿ ಮುಂದಕ್ಕೆ ಆಗುಮಾಡುವ ಮಣ್ಣ ಬಿಟ್ಟಲ್ಲಿಯೇ ಆಗಾಮಿಕರ್ಮ ನಾಸ್ತಿಯಾಯಿತು. ಸಂಚಿತಕರ್ಮ ನಾಸ್ತಿಯಾದಲ್ಲಿಯೇ ಬ್ರಹ್ಮನ ಸೃಷ್ಟಿಯೆಂಬ ಸೆರೆಮನೆ ಹಾಳಾಯಿತು. ಪ್ರಾರಬ್ಧಕರ್ಮ ನಾಸ್ತಿಯಾದಲ್ಲಿಯೇ ವಿಷ್ಣುವಿನ ಸ್ಥಿತಿಯೆಂಬ ಸಂಕೋಲೆ ತಡೆಗಡೆಯಿತು. ಆಗಾಮಿಕರ್ಮ ನಾಸ್ತಿಯಾದಲ್ಲಿಯೇ ರುದ್ರನ ಸಂಹಾರವೆಂಬ ಪ್ರಳಯಾಗ್ನಿ ಕೆಟ್ಟಿತ್ತು. ಇಂತೀ ಮೂವರ ದಾಂಟಿದಲ್ಲಿಯೇ ತಂದೆ ತಾಯಿಗಳೆನ್ನ ಕೈವಿಡಿದೆತ್ತಿಕೊಂಡು ಬಸವಾದಿ ಪ್ರಮಥರ ಕೈ ವಶವ ಮಾಡಿದರಯ್ಯ ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನ.