Index   ವಚನ - 63    Search  
 
ಭಕ್ತಿಯಿಂದ ವಿರಕ್ತರೆಂದು ಬಾಯತುಂಬ ಕರೆಯಿಸಿಕೊಂಬ ವಿರಕ್ತರೆಲ್ಲ ವಿರಕ್ತರೇ ಅಯ್ಯ? ವಿರಕ್ತರದೊಂದು ಸಾಮರ್ಥ್ಯ ಸುಗುಣ ಸಮುದ್ರೆಯನೊರೆವುತಿಪ್ಪೆ ಕೇಳಿರಣ್ಣ. ಕಾಯದ ಕಣ್ಣ ಜಾಗ್ರದಲ್ಲಿ ಇಷ್ಟಲಿಂಗಕ್ಕೆ ಸಮರ್ಪಿಸಿ ಕಾಯಗುಣಂಗಳ ಕೆಲಕ್ಕೆ ತೊಲಗಿಸಿ ತತ್‍ಪದನಾಗಿ ಮನದಕಣ್ಣ ಸ್ವಪ್ನದಲ್ಲಿ ಪ್ರಾಣಲಿಂಗಕ್ಕೆ ಸಮರ್ಪಿಸಿ ಮನೋವಿಕಾರಮಂ ಹಸಗೆಡಿಸಿ ತ್ವಂಪದನಾಗಿ ಭಾವದಕಣ್ಣ ಸುಷುಪ್ತಿಯಲ್ಲಿ ಭಾವಲಿಂಗಕ್ಕೆ ಸಮರ್ಪಿಸಿ ಭಾವದಿಚ್ಛೆಯ ತಪ್ಪಿಸಿ ಅಸಿಪದವಾಗಿ ಜ್ಞಾತೃ ಜ್ಞಾನ ಜ್ಞೇಯವೆಂಬ ತ್ರಿಪುಟಿಯನೊಂದುಮಾಡಿ ಪರಬ್ರಹ್ಮ ಸ್ವರೂಪವಾಗಿ ಜಾಗ್ರತ್ ಸ್ವಪ್ನ ಸುಷುಪ್ತಿಯೆಂಬರಿವರಿತು ಹಸಿವು ತೃಷೆ ವಿಷಯ ವ್ಯಾಪಾರಂಗಳಂ ಸುಟ್ಟುರುಹಿದ ತೋಂಟದ ಸಿದ್ಧಲಿಂಗ ಅಲ್ಲಮಪ್ರಭು ಅನಿಮಿಷದೇವರು ಇಂತಿವರು ವಿರಕ್ತರಲ್ಲದೆ ಮತ್ತೆ ವಿರಕ್ತರೆಂಬ ನುಡಿ ನಿಮ್ಮ ಹಡಪದಲ್ಲಿರಲಿ. ಅದೇನು ಕಾರಣವೆಂದೊಡೆ ಗ್ರಂಥ: 'ವಿಕಾರಂ ವಿಷಯಾದ್ದೂರಂ ರಕಾರಂ ರಾಗವರ್ಜಿತಂ| ಕ್ತಕಾರಂ ತ್ರಿಗುಣಂ ನಾಸ್ತಿ ವಿರಕ್ತಸ್ಯಾರ್ಥಮುಚ್ಯತೇ'|| ಇಂತೆಂದುದಾಗಿ ಹಗಲಾದರೆ ಹಸಿವು ತೃಷೆಗೆ ಬಾಯಿಬಿಟ್ಟು ಇರುಳಾದರೆ ವಿಷಯಾತುರನಾಗಿ ಕಳವಳಿಸಿ ಕನಸ ಕಂಡು ಬೆದರಿ ಶಿವಶಿವ ಎಂದು ಕುಳಿತು ಸುಷುಪ್ತಿಯಲ್ಲಿ ಮೈಮರೆದು ಮುಟ್ಟಿ ತಟ್ಟಿದ ಸವುಜ್ಞೆಯನರಿಯದಿಪ್ಪವರೆಲ್ಲ ವಿರಕ್ತರೆ? ಅಲ್ಲಲ್ಲ. ಅವರು ತ್ರಿವಿಧ ಪದಾರ್ಥವನತಿಗಳೆದು ಗುರು ಲಿಂಗ ಜಂಗಮವನಂತರಂಗದಲ್ಲಿ ಪೂಜೆಯ ಮಾಡುವ ದಾಸೋಹಿಗಳಯ್ಯ, ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನ.