Index   ವಚನ - 41    Search  
 
ಮತ್ತಂ ಸಾಕ್ಷಿ: ಎಲೆ ಮಗನೆ ಕೇಳು: ಅಷ್ಟು ತಾ ಸುಳ್ಳಿಲ್ಲದೆ, ಒಂದಿಷ್ಟು ತಾ ಖರೆಯಲ್ಲದೆ ಸೃಷ್ಟಿಕರ್ತನಂತೆ ಹೇಳಿಕೊಂಬುವಂಥದು. ಎನ್ನ ಕಷ್ಟಮಂ ಏನು ಹೇಳಲಿ. ಎಲೆ ಮಗನೆ ಹೊಟ್ಟೆ ಕಿಚ್ಚಿನ ಸೂಳೆಮಕ್ಕಳಿವರು, ಅಷ್ಟಾವರಣ ಪಂಚಾಚಾರ ಬಲ್ಲೆವೆಂದು ಭ್ರಷ್ಟನಡೆನುಡಿಯಿಂದ ಕೆಟ್ಟುಹೋಗುವರಲ್ಲದೆ, ಅಷ್ಟಾವರಣ ಬಲ್ಲಿದ ಮಹಾತ್ಮರು, ಜ್ಞಾನದೃಷ್ಟಿಯಿಂದ ಅಷ್ಟದಳಕಮಲಮಧ್ಯದಲ್ಲಿ ಅಷ್ಟು ತಾ ಸುಳ್ಳಿಲ್ಲದೆ ಪಂಚಾಚಾರಮಂ ಗಟ್ಟಿಕೊಂಡು, ಪಂಚತತ್ವದಲ್ಲಿ ಪಂಚವಾದ್ಯಗಳಿಂದ ಪಂಚಾಕ್ಷರದ ರಗಳೆಯನು ಅಷ್ಟು ತಾ ಖರೆಯಲ್ಲದೆ ದಿಟ್ಟರಾಗಿ ಕೂಗುತಿರ್ಪರಲ್ಲದೆ, ಎಷ್ಟು ಹೇಳಿದ ಕಾಲಕೂ ಬಿಟ್ಟಾಡಿಕೊಂಬುವರು. ಈ ದೃಷ್ಟ ಪ್ರಾಣಿಗಳು ಕಷ್ಟಕರ್ಮದ ಬಲೆಯಲ್ಲಿ ಸಿಲುಕಿ, ಏಕೆ ಎಮ್ಮನು ಹುಟ್ಟಿಸಿದನೆಂದು ಶೋಕವೃತ್ತಿಯಿಂದ ಬಿಟ್ಟಿ ದುಡಿಯುತಿರ್ಪರು. ಎಲೆ ಮಗನೆ ಅಷ್ಟು ತಾ ಸುಳ್ಳಲ್ಲದೆ ಹಠಯೋಗಮಂ ಸಂಪಾದಿಸಿ, ನೋಟಕೂಟಕ್ಕೆ ಭೇದಭಾವಾರ್ಥವಿಲ್ಲದೆ, ಪಟ್ಟಾಭಿಷೇಕವಾಗಲು ವರಿಷ್ಠರೊಳಗೊಂದು ಶ್ರೇಷ್ಠನಾಗಿ, ಅಷ್ಟಾವರಣದಾಚಾರ ವಿಚಾರದಿಂದ ಗುಟ್ಟಕೊಡದ ಹಾಂಗಿರ್ಪರು. ಷಡುಸ್ಥಲದ ನಿರ್ಣಯಮಂ ತಮ್ಮಟೆ ವಾದ್ಯಗಳಿಂದ ನಾಟಕ ನೀರಾಂಜನ ವಸ್ತುವೆ ಘನವಾಗಿ, ಅಕಟಕಟಾ ಬಿಟ್ಟಗಲದಿರ್ಪಾತನೆಂದು ಹೇಳಿಕೊಂಬುವೆ. ಎನ್ನೊಳಗಲ್ಲವೆ ಎಲೆ ಲಿಂಗವೆ, ಗುರುಶಂಭುಲಿಂಗವೆ, ನಿಜಗುರು ನಿರಾಲಂಬಪ್ರಭುವೆ.