Index   ವಚನ - 7    Search  
 
ಸ್ಥಲಂಗಳನರಿದಿಹೆನೆಂದಡೆ ತ್ರಿವಿಧಸ್ಥಲ ಎನಗಿಲ್ಲ. ಷಡುಸ್ಥಲವ ಮುನ್ನವೆ ಅರಿಯೆ. ತತ್ತ್ವವನರಿದಿಹೆನೆಂದಡೆ ಇಪ್ಪತ್ತೈದರ ಗೊತ್ತಿನವನಲ್ಲ. ಮಿಕ್ಕಾದ ಸತ್ಕ್ರೀಯದಲ್ಲಿ ನಡೆದಿಹೆನೆಂದಡೆ ಭಕ್ತಿ ಜ್ಞಾನ ವೈರಾಗ್ಯ ತ್ರಿವಿಧ ಲಕ್ಷ್ಯವಿಧ ನಾನಲ್ಲ. ನಿಷ್ಠೆಯಲ್ಲಿ ದೃಷ್ಟವ ಕಂಡಿಹನೆಂದಡೆ ವಿಶ್ವಾಸ ಎನಗಿಲ್ಲ. ವಿರಕ್ತಿಯಲ್ಲಿ ವೇಧಿಸಿಹೆನೆಂದಡೆ, ತ್ರಿವಿಧ ಮಲದ ಮೊತ್ತದೊಳಗೆ ಮತ್ತನಾಗಿದ್ದೇನೆ. ಮತ್ತೆ ನಿಶ್ಚಯವನರಿದಿಹೆನೆಂದಡೆ, ಆತ್ಮಂಗೆ ಲಕ್ಷವಿಡುವದೊಂದು ಗೊತ್ತ ಕಾಣೆ. ಇಂತೀ ಕಷ್ಟತನುವಿನಲ್ಲಿ ಬಂದು, ಧೂರ್ತನಾಗಿ ಕೆಟ್ಟುಹೋಗುತ್ತಿದ್ದೇನೆ. ಗುಡಿಸಿದ ಹಿಕ್ಕೆಯಲ್ಲಿ ಬಂದು ತನ್ನ ನಿಷ್ಠೆಯ ತೋರಿ, ಎನಗೆ ಸದ್ಭಕ್ತಿಯ ಬೀರಿ, ವಿಶ್ವಾಸಿಗಳಿಗೆಲ್ಲಕ್ಕೆ ಕೃತ್ಯದೊಳಗಾಗಿ, ನಿತ್ಯನೇಮಂಗಳಲ್ಲಿ ಅಚ್ಚೊತ್ತಿದಂತಿರು. ನೀನೆ ಮುಕ್ತನಹೆ, ನಿಜನಿತ್ಯನಹೆ, ಜಗಕೆ ಕರ್ತೃವಹೆ. ಎನ್ನ ಹಿಕ್ಕೆಗೆ ಬಂದು ಸಿಕ್ಕಿದೆಯಲ್ಲಾ, ಮಹಾಮಹಿಮ ವೀರಬೀರೇಶ್ವರಾ.