Index   ವಚನ - 10    Search  
 
ವೇಳೆಯನರಿದು ಧ್ವನಿದೋರುವ ತಾಮ್ರಚೂಡಂಗೆ ಅದಾವ ಜ್ಞಾನ? ಮಧುರರಸಂಗಳಿದ್ದ ಠಾವನರಿದೆಯಿದುವ ಪಿಪೀಲಿಕಂಗೆ ಅದಾವ ಜ್ಞಾನ? ತಾನುಂಡು ನೆನದಡೆ ಶಿಶು ತೃಪ್ತಿಯಹ ಕೂರ್ಮಂಗೆ ಅದಾವ ಜ್ಞಾನ? ಅರಿದು ನಡೆದಡೆ ವೇದವೇದ್ಯನು, ಅರಿದು ನಡೆದಡೆ ಶಾಸ್ತ್ರಸಂಬಂಧಿ, ಅರಿದು ನಡೆದಡೆ ಪುರಾಣಪುಣ್ಯವಂತನು, ಅರಿದು ನಡೆದಡೆ ಸಕಲಾಗಮಭರಿತನು. ಇಂತೀ ಪಂಚಾಕ್ಷರಿಯ ಮೂಲಷಡಕ್ಷರಿಯ ಭೇದ. ಜಗಕ್ಕಾಧಾರವಾರೆಂಬುದ ಏಕಮೇವನದ್ವಿತೀಯನೆಂಬುದ ತಿಳಿದು, ಸೋಹಂ ಕೋಹಂ ಎಂಬುದ ತಿಳಿದು, ಆ ನಿಜವೆ ವಸ್ತುವಿಗೊಡಲೆಂಬುದ ಪ್ರಮಾಣಿಸಿ, ನುಡಿದು ನಡೆಯಬಲ್ಲವನೆ ವೇದವೇದ್ಯನು ಕಾಣಾ, ಲಲಾಮಭೀಮಸಂಗಮೇಶ್ವರಲಿಂಗವು ತಾನಾದ ಶರಣ.