ವಚನ - 1526     
 
ಶ್ರೀಗುರುಸ್ವಾಮಿ ಶಿಷ್ಯನ ಪೂರ್ವಾಶ್ರಯಮಂ ಕಳೆದು ಪುನರ್ಜಾತನಂ ಮಾಡಿದ ಬಳಿಕ, ಪಂಚಭೂತಕಾಯವ ಕಳೆದು ಪ್ರಸಾದಕಾಯವ ಮಾಡಿದ ಬಳಿಕ, ವಾಯುಪ್ರಾಣಿಯ ಕಳೆದು ಲಿಂಗಪ್ರಾಣಿಯ ಮಾಡಿದ ಬಳಿಕ, ಎಲ್ಲಿಯ ಕುಲಸೂತಕ, ಎಲ್ಲಿಯ ಛಲಸೂತಕ? ಎಲ್ಲಿಯ ತನುಸೂತಕ ಎಲ್ಲಿಯ ಮನಸೂತಕ? ಎಲ್ಲಿಯ ನೆನಹುಸೂತಕ ಎಲ್ಲಿಯ ಭಾವಸೂತಕ? ಇವನೆಂತೂ ಹಿಡಿಯಲಾಗದು, ಸದ್ಭಕ್ತನು. ಕುಲಸೂತಕವುಳ್ಳನ್ನಕ್ಕರ ಭಕ್ತನಲ್ಲ, ಛಲಸೂತಕವುಳ್ಳನ್ನಕ್ಕರ ಮಹೇಶ್ವರನಲ್ಲ, ತನುಸೂತಕವುಳ್ಳನ್ನಕ್ಕರ ಪ್ರಸಾದಿಯಲ್ಲ, ಮನಸೂತಕವುಳ್ಳನ್ನಕ್ಕರ ಪ್ರಾಣಲಿಂಗಿಯಲ್ಲ, ನೆನಹುಸೂತಕವುಳ್ಳನ್ನಕ್ಕರ ಶರಣನಲ್ಲ, ಭಾವಸೂತಕವುಳ್ಳನ್ನಕ್ಕರ ಐಕ್ಯನಲ್ಲ, ಇಂತೀ ಸೂತಕವ ಮುಂದುಗೊಂಡಿಪ್ಪವರ ಮುಖವ ನೋಡಲಾಗದು ಗುಹೇಶ್ವರ.