ಅಂಗದ ಗುಣವಳಿದು ಲಿಂಗಾಗಿಯಾದ ನಿಜಶರಣನು,
ಜಗದ ಠಕ್ಕರಾದ ಜಂಗುಳಿಗಳ
ಬಾಗಿಲುಗಳಿಗೆ ಹೋಗನು ನೋಡ.
ಹೋದಡೆ ಗುರುವಾಕ್ಯವಿಡಿದು ಹೋಗಿ,
`ಲಿಂಗಾರ್ಪಿತ ಭಿಕ್ಷಾ' ಎಂದು ಭಿಕ್ಷವ ಬೇಡಿ,
ಲಿಂಗಾಣತಿಯಿಂದ ಬಂದ ಭಿಕ್ಷವ,
ಲಿಂಗ ನೆನಹಿನಿಂದ ಲಿಂಗನೈವೇದ್ಯವಾಗಿ ಕೈಕೊಂಡು,
ಬಂದಬಂದ ಸ್ಥಲವನರಿದು, ಲಿಂಗಾರ್ಪಿತವ ಮಾಡಬೇಕು.
ಅದೆಂತೆಂದಡೆ:
ರಾಜಾನ್ನಂ ನರಕಶ್ಚೈವ ಸೂತಕಾನ್ನಂ ತಥೈವ ಚ |
ಮೃತಾನ್ನಂ ವರ್ಜಯೇತ್ ಜ್ಞಾನೀ ಭಕ್ತಾನ್ನಂ ಭುಂಜತೇ ಸದಾ ||
ಇಂತೆಂದುದಾಗಿ, ಲಿಂಗಾಂಗಿಗೆ, ಲಿಂಗಾಭಿಮಾನಿಗೆ, ಲಿಂಗಪ್ರಾಣಿಗೆ
ಇದೇ ಪಥವಯ್ಯಾ, ಸಕಳೇಶ್ವರದೇವಾ ನಿಮ್ಮಾಣೆ.
Art
Manuscript
Music
Courtesy:
Transliteration
Aṅgada guṇavaḷidu liṅgāgiyāda nijaśaraṇanu,
jagada ṭhakkarāda jaṅguḷigaḷa
bāgilugaḷige hōganu nōḍa.
Hōdaḍe guruvākyaviḍidu hōgi,
`liṅgārpita bhikṣā' endu bhikṣava bēḍi,
liṅgāṇatiyinda banda bhikṣava,
liṅga nenahininda liṅganaivēdyavāgi kaikoṇḍu,
bandabanda sthalavanaridu, liṅgārpitava māḍabēku.
Adentendaḍe:
Rājānnaṁ narakaścaiva sūtakānnaṁ tathaiva ca |
mr̥tānnaṁ varjayēt jñānī bhaktānnaṁ bhun̄jatē sadā ||
intendudāgi, liṅgāṅgige, liṅgābhimānige, liṅgaprāṇige
idē pathavayyā, sakaḷēśvaradēvā nim'māṇe.