Index   ವಚನ - 2    Search  
 
ಅಂಗದ ಪ್ರಕೃತಿ ಲಿಂಗದಲ್ಲಿ ಅಳಿದು, ಮನದ ಪ್ರಕೃತಿ ಅರಿವಿನಲ್ಲಿ ಅಳಿದು, ಜೀವಭ್ರಾಂತಿ ನಿಶ್ಚಿಂತಪದದಲ್ಲಿ ಅಳಿದು, ನಿಶ್ಶೂನ್ಯ ನಿರಾಮಯವಾದ ನಿವಾಸಕ್ಕೆ ಸದಾಚಾರವೆಂಬ ಕೆಸರುಗಲ್ಲನಿಕ್ಕಿ, ಸರ್ವಾಚಾರಸಂಪತ್ತೆಂಬ ಹೂಗಲ್ಲ ಮುಚ್ಚಿ, ಅಂತಃಕರಣಚತುಷ್ಟಯವೆಂಬ ನಾಲ್ಕು ಕಂಬಗಳಂ ನಿಲಿಸಿ: ಜ್ಞಾತೃವೆಂಬ ಭಿತ್ತಿಯ ಮೇಲೆ ಜ್ಞಾನವೆಂಬ ಶಿಖರಿಯನನುಗೊಳಿಸಿ, ಜ್ಞೇಯವೆಂಬ ಹೊನ್ನಕಳಶಮಂ ಶೃಂಗಾರಮಂ ಮಾಡಿ, ಬ್ರಹ್ಮರಂಧ್ರದ ಊಧ್ರ್ವದ್ವಾರವೆಂಬ ನಿಜದ್ವಾರಮಂ ಮಾಡಿ, ನಿರ್ವಯಲಲ್ಲಿ ನೆಲೆಗೊಳಿಸಿ, ಬಸವಪ್ರಿಯ ಕೂಡಲಚನ್ನಸಂಗನ ಶರಣ ಪ್ರಭುದೇವರ ಬರವಿಂಗೆ ಶೂನ್ಯಸಿಂಹಾಸನವಂ ರಚಿಸಿ, ಬರವ ಹಾರುತ್ತಿದನೆನ್ನ ಪರಮಗುರು ಬಸವಣ್ಣನು.