Index   ವಚನ - 78    Search  
 
ವಿಭೂತಿಯಿಂದೆ ಮಾಡಬಹುದು ಅರ್ಬುದಕೋಟಿ ಭಕ್ತರನಾದಡೆಯೂ, ವಿಭೂತಿಯಿಲ್ಲದೆ ಮಾಡಿ ತೋರಿರೆ ಓರ್ವ ದ್ವಿಜನ? ವಿಭೂತಿಯಿಂದೆ ವಿಪ್ರನಾಗನೆ ಕಬ್ಬಿಲಿತಿಯ ಮಗ ವ್ಯಾಸನು? ವಿಭೂತಿಯಿಂದಗ್ರಜನಾಗನೆ ಕುಂಭಸಂಭವನು? ವಿಭೂತಿಯಿಂದೆ ಹಾರುವನಾಗನೆ ಊರ್ವಶಿಗೆ ಹುಟ್ಟಿದ ವಶಿಷ್ಠನು? ವಿಭೂತಿಯಿಂದೆ ವಿಶ್ವಾಮಿತ್ರ ಸದ್ಬ್ರಾಹ್ಮಣನಾಗನೆ? ಉರ್ವಿಯೊಳಗೆ ಮುಂಗಯ್ಯ ಕಂಕಣಕ್ಕೆ ಶುಭ್ರದರ್ಪಣವೇಕೆ? ವಿಭೂತಿಯನೊಲ್ಲದ ನಿರ್ಭಾಗ್ಯದ್ವಿಜರು, ಸರ್ವಶಾಸ್ತ್ರ ಶ್ರುತಿ ಸ್ಮೃತಿ ಪುರಾಣ ಶಾಪಹತರೆಂದು ಶ್ರುತಿಗಳು ಬೊಬ್ಬಿಡುತ್ತಿವೆ, ಬಸವಪ್ರಿಯ ಕೂಡಲಚೆನ್ನಸಂಗಮದೇವಾ.