Index   ವಚನ - 97    Search  
 
ಹಜ್ಜೆ ಇಲ್ಲದ ಪುರುಷ, ಆ ಸಜ್ಜನಸ್ತ್ರೀ, ಷಡುಪಂಚಮರುದ್ರ, ಕಾಳಾಂಧರ, ವಾರಿಧಿ, ಆತ್ಮಾನಾತ್ಮ ಇಂತಿವೇನೂ ಇಲ್ಲದಂದು, ಅತ್ತತ್ತಲಿರ್ದ ಬೆಳಗಿನ ಚಿನ್ಮೂರ್ತಿಯಲ್ಲಿ ಚಿದ್ವಿಭೂತಿ ಇದ್ದಿತ್ತು. ಆ ಚಿದ್ವಿಭೂತಿ ಚಿದ್ಘನಾತ್ಮಕ ರತ್ನವಾಯಿತ್ತು. ಆ ಚಿದ್ಘನಾತ್ಮಕ ರತ್ನವೆ ಚಿಚ್ಛಕ್ತಿಯಾಯಿತ್ತು. ಆ ಚಿಚ್ಛಕ್ತಿ ಸಕಲಚೈತನ್ಯಾತ್ಮಕ ಶರಣನಾಯಿತ್ತು. ಆ ಶರಣನೊಳಗೊಂದು ಕೋಳಿ ದ್ವಾದಶವರ್ಣದ ಸುನಾದವಾಗಿ ಕೂಗಿತ್ತು. ಆ ಸುನಾದಂಗಳ ಝೇಂಕಾರವು ಚತುರ್ದಶ ಸಾವಿರಕ್ಷರ ರೂಪಕವಾಗಿ, ಆ ಶರಣನ ಸಪ್ತಚಕ್ರದ ಕಮಲದೊಳಗೆ ಪ್ರವೇಷ್ಟಿಸಿ, ಗೋಪ್ಯವಾಗಿದವು. ಆ ಶರಣನಲ್ಲಿ ಷಡುಶಿವಮೂರ್ತಿಗಳುದಯಿಸಿದರು. ಆ ಮೂರ್ತಿಗಳಲ್ಲಿ ಷಡುಸ್ಥಲ ಸತ್ಕ್ರಿಯೆಗಳು ತೋರಿದವು. ಅವರೆಲ್ಲರಲ್ಲಿ ಅನಂತಕೋಟಿ ಮೂರ್ತಿಗಳ ಮೇಲೆ, ತೊಂಬತ್ತಾರು ಸಾವಿರ ಶಿವಮೂರ್ತಿಗಳುದಯಿಸಿದರು. ಆ ಶರಣನ ನಾಡಿಗಳೊಳಗೆ ಚಿದ್ಮಣಿ, ಚಿದ್ಭಸ್ಮ, ಚಿಲ್ಲಿಂಗ ಇಂತಿವೆಲ್ಲ ತೋರಿದವು. ಇವನೆಲ್ಲವ, ಶಿವಗಣಂಗಳಲ್ಲಿ ಆ ಶರಣನು, ಉಪದೇಶಮಾರ್ಗದಿಂ ಧರಿಸಿಕೊಂಡು, ನೂರೊಂದರ ಮೇಲೆ ನಿಂದು, ದ್ವಾದಶ ಸಪ್ತವಿಂಶತಿ ಛತ್ತೀಸದ್ವಯವೆ ಎಪ್ಪತ್ತು ಶತಾಷ್ಟವೆಂಬ ಪಂಚಜಪಮಾಲೆಗಳಿಗೆ ಹನ್ನೆರಡು ಸಿಡಿಲ ಸುನಾದವನೊಡದು, ತ್ರಿ ಆರುವೇಳೆ ಕೂಡಿ, ನೂರೆಂಟಕ್ಕೆ ಸಂದಾನಿಸಿ ಜಪಿಸುತ್ತಿಪ್ಪ ಅನಂತ ಪ್ರಮಥರಂ, ಬಸವಪ್ರಿಯ ಕೂಡಲಚೆನ್ನಸಂಗಯ್ಯನಲ್ಲಿ ಕಂಡು ಸುಖಿಯಾದೆನು.