ತನ್ನ ಶ್ರೀಗುರುವಿಂಗೆ ಸಕಲಪದಾರ್ಥವ
ಕೊಟ್ಟು ಕೊಂಡಡೆ ಪ್ರಸಾದ.
ತನ್ನ ಪ್ರಾಣಲಿಂಗಕ್ಕೆ ಸಕಲಪದಾರ್ಥವ
ಕೊಟ್ಟು ಕೊಂಡಡೆ ಪ್ರಸಾದ.
ಜಂಗಮಕ್ಕೆ ಸಕಲಪದಾರ್ಥವ ಕೊಟ್ಟು ಕೊಂಡಡೆ ಪ್ರಸಾದ.
ಇದೇ ಪ್ರಸಾದದ ಹಾದಿ ಕಂಡಯ್ಯಾ.
ಮುನ್ನಾದಿಯ ಪುರಾತನರು ನಡೆದ ಪಥವು ಕಂಡಯ್ಯಾ.
ಇಂತೀ ಶ್ರೀಗುರುವಿಂಗೆ ಕೊಡದೆ,
ಲಿಂಗಕ್ಕೆ ಕೊಡದೆ, ಜಂಗಮಕ್ಕೆ ಕೊಡದೆ
ತಾನೆ ಉಂಡನಾದಡೆ, ಹುಳುಗೊಂಡದಲ್ಲಿಕ್ಕುವ,
ನಮ್ಮ ದೇವರಾಯ ಸೊಡ್ಡಳ.