Index   ವಚನ - 58    Search  
 
ಪ್ರಣವದ ಪ್ರಣವವೆ ನಕಾರ, ಪ್ರಣವದ ದಂಡಕವೆ ಮಕಾರ, ಪ್ರಣವದ ಕುಂಡಲಿಯೆ ಶಿಕಾರ, ಪ್ರಣವದ ಅರ್ಧಚಂದ್ರವೆ ವಕಾರ, ಪ್ರಣವದ ಬಿಂದುವೆ ಯಕಾರ. ನಕಾರದ ದಂಡಕವೆ ಮಕಾರ, ನಕಾರದ ಬಲದ ಕೋಡೆ ಶಿಕಾರ, ನಕಾರದ ಎಡದ ಕೋಡೆ ವಕಾರ, ನಕಾರದ ಬಿಂದುವೆ ಯಕಾರ, ನಕಾರದ ತಾರಕವೆ ಓಂಕಾರ. ಮಕಾರದ ದಂಡಕವೆ ನಕಾರ, ಮಕಾರದ ಬಲದ ಕೋಡೆ ಶಿಕಾರ, ಮಕಾರದ ಎಡದ ಕೋಡೆ ವಕಾರ, ಮಕಾರದ ಬಿಂದುವೆ ಯಕಾರ, ಮಕಾರದ ತಾರಕವೆ ಓಂಕಾರ. ಶಿಕಾರದ ದಂಡಕವೆ ನಕಾರ, ಶಿಕಾರದ ಬಲದ ಕೋಡೆ ಮಕಾರ, ಶಿಕಾರದ ಎಡದ ಕೋಡೆ ವಕಾರ, ಶಿಕಾರದ ಬಿಂದುವೆ ಯಕಾರ, ಶಿಕಾರದ ತಾರಕವೆ ಓಂಕಾರ. ವಕಾರದ ದಂಡಕವೆ ನಕಾರ, ವಕಾರದ ಬಲದ ಕೋಡೆ ಮಕಾರ, ವಕಾರದ ಎಡದ ಕೋಡೆ ಶಿಕಾರ, ವಕಾರದ ಬಿಂದುವೆ ಯಕಾರ, ವಕಾರದ ತಾರಕವೆ ಓಂಕಾರ. ಯಾಕಾರದ ದಂಡಕವೆ ನಕಾರ, ಯಕಾರದ ಬಲದ ಕೋಡೆ ಮಕಾರ, ಯಕಾರದ ಎಡದ ಕೋಡೆ ಶಿಕಾರ, ಯಕಾರದ ಬಿಂದುವೆ ವಕಾರ, ಯಕಾರದ ತಾರಕವೆ ಓಂಕಾರ. ಇಂತಪ್ಪ ಮೂವತ್ತಾರು ಮೂಲಪ್ರಣವಂಗಳೆ, ಪ್ರಥಮಗುರು ಬಸವಣ್ಣನಾದುದಂ, ಸೊಡ್ಡಳ ಲಿಂಗದಲ್ಲಿ ಕಂಡು ಸುಖಿಯಾಗಿ, ನಾನು ಬಸವಾ ಬಸವಾ ಎಂದು ಜಪಿಸುತಿರ್ದೆನಯ್ಯಾ.