ಶಿವಯೆಂದೋದದವನ ಓದು, ಗಿಳಿಯೋದು.
ಶಿವ ನಿಮ್ಮನಾರಾಧಿಸದವನ ಮನೆ, ಕೆಮ್ಮನೆ.
ಶಿವ ನಿಮ್ಮ ನೋಡದವನ ಕಣ್ಣು, ಹೀಲಿಯ ಕಣ್ಣು.
ಶಿವ ನಿಮ್ಮ ಹಾಡದವನ ಬಾಯಿ, ಕನ್ನಡದ ಬಾಯಿ.
ಶಿವ ನಿಮ್ಮ ಹೊಗಳದವನ ಬಾಯ ನಾಲಗೆ,
ಬಚ್ಚಲ ತಂಪಿನ ಜವುಗಿನಲ್ಲಿ ಹುಟ್ಟಿದ ಜಿಗುಳಿಯಯ್ಯಾ.
ಶಿವ ನಿಮಗೆರಗದ ಕರ್ಮಿ, ಶೂಲದ ಹೆಣ.
ಶಿವ ನಿಮ್ಮ ನೆನೆಯದವನ ದೇಹ, ಸಂದೇಹ.
ಶಿವ ನಿಮ್ಮ ಭಕ್ತನಲ್ಲದವನ ಸಿರಿಯು,
ವಿದ್ಯೆ ಬುದ್ಧಿ ಕುಲ ಧನ ಶಬ್ದದ ಮೇಲಣ ತೊಡಿಗೆ.
ಅಂತವನೇತಕ್ಕೆ ಬಾತೆ?
ಇದು ಕಾರಣ, ಭವಘೋರಕ್ಕಾರದೆ ಶರಣುಹೊಕ್ಕೆನಯ್ಯಾ.
ಸೊಡ್ಡಳಾ, ಇನ್ನು ಭವಬಂಧನ ನಮಗಿಲ್ಲವಯ್ಯಾ.