ಚತುರ್ವೇದನುಭಾವ ಜಂಗಮವೆಲ್ಲ ಬ್ರಹ್ಮನ ಸಂತತಿ.
ಹದಿನೆಂಟು ಪುರಾಣದ ಅನುಭಾವ
ಮಾಡುವ ಜಂಗಮವೆಲ್ಲ ವಿಷ್ಣುವಿನ ಸಂತತಿ.
ಮೂವತ್ತೆರಡು ದಿವ್ಯ ಆಗಮ[ದ ಅನುಭಾವ] ಮಾಡುವ
ಜಂಗಮವೆಲ್ಲ ಈಶ್ವರನ ಸಂತತಿ.
ಆರು ಶಾಸ್ತ್ರದನುಭಾವ ಮಾಡುವ
ಜಂಗಮವೆಲ್ಲ ಸದಾಶಿವನ ಸಂತತಿ.
ಇಂತೀ ಎಲ್ಲ ಶಬ್ದವನು ಮುಟ್ಟಿ
ಲಿಂಗದನುಭಾವ ಮಾಡುವ ಜಂಗಮವೆಲ್ಲ
ಘನನಿತ್ಯ ಕಾಣಾ, ಜಂಗಮಲಿಂಗಪ್ರಭುವೆ.