Index   ವಚನ - 15    Search  
 
ಹಾಡಿ ಹೊಗಳುವ ಜಂಗಮವೆಲ್ಲ ಬ್ರಹ್ಮನ ಸಂತತಿ. ಕಾಡಿ ಬೇಡುವ ಜಂಗಮವೆಲ್ಲ ವಿಷ್ಣುವಿನ ಸಂತತಿ. ಹಾಗವರಿಯದೆ ಹೊಕ್ಕು ಉಂಬುವ ಜಂಗಮವೆಲ್ಲ [ರುದ್ರನ ಸಂತತಿ]. ವ್ಯಾಪಾರವ ಮಾಡುವ ಜಂಗಮವೆಲ್ಲ ಈಶ್ವರನ ಸಂತತಿ. ಇಂತೀ ಅನುಭಾವ ಮಾಡುವ ಜಂಗಮವೆಲ್ಲ ಪರಶಿವನ ಸಂತತಿ. ಮುಕ್ತಿ ಕುಸ್ತಿಯ ಮಾಡುವ ಜಂಗಮವೆಲ್ಲ ಮಹಾಲಿಂಗವೆನಿಸುವದು. ಹಾಡದೆ ಹೊಗಳದೆ ಕಾಡದೆ ಬೇಡದೆ, ಹಾಗವನರಿಯದೆ ಹೊಗದೆ ವ್ಯಾಪಾರ ಮಾಡದೆ, ಭಕ್ತಿಗೆ ತೊಲಗಿ ವ್ಯರ್ಥದಿ ಮುಕ್ತಿ ಕುಸ್ತಿಯನಾಡದೆ, ಭಿಕ್ಷವೆಂಬ ಶಬ್ದದಲ್ಲಿ ಇದಿರಿಟ್ಟು, ಪದಾರ್ಥವ ಲಿಂಗಕರ್ಪಿತವ ಮಾಡುವುದೆ ನಿಜಮುಕ್ತಿ. ಮಹದಾಕಾಶ ಮಹಿಮಾಪತಿಯೆಂಬ ಘನಲಿಂಗಕ್ಕೆ ಅರ್ಪಿತ ಮಾಡುವ ಗುರು. ಅದಾವುದೆಂದಡೆ: ಅದು ಅನಾದಿ ಸಂಜ್ಞೆಯೆಂಬ ಜಂಗಮವು. ಅಂಥ ಜಂಗಮದ ಶ್ರೀಚರಣ ನೆರೆನಂಬಿ, ನೆಟ್ಟನಳಿವಸ್ಥಿರಕಾಯರ ಎನಗೊಮ್ಮೆ ತೋರಿಸಯ್ಯಾ, ಜಂಗಮಲಿಂಗಪ್ರಭುವೆ.