Index   ವಚನ - 2    Search  
 
ಗುರುವಿನಿಂದ ಅಂಗದ ಮೇಲೆ ಶಿವಲಿಂಗ ಧಾರಣವಂ ಮಾಡಿತಾಭಕ್ತನೆನಿಸಿ, ಹಿಂದೆ ಮುಂದೆ ವಿಚಾರಿಸದೆ, ಆಚಾರದಲ್ಲಿ ಅಧಿಕನೆನಿಸಿಕೊಳಬೇಕೆಂಬ ತೊಳ ಮುಂದುಗೊಂಡು ಭಕ್ಷ್ಯ ಭೋಜ್ಯ ಲೇಹ್ಯ ಚೋಹ್ಯ ಪಾನ ಮೊದಲಾದ ಪದಾರ್ಥದ ರುಚಿಗಳೆಲ್ಲಮಂ ಜಂಗಮದಿಂದ ಪ್ರಸಾದವ ಪಡೆದುಕೊಂಬೆನೆಂದು ನೆನೆವ ಮಾಡುವರು. ಅರ್ಪಿತಕ್ಕೆ ಸಲುವ ಪದಾರ್ಥಮಂ ಕಣ್ಣಿನಲ್ಲಿ ಕಂಡು, ಮನದಲ್ಲಿ ನೆನೆದು, ಆ ಪದಾರ್ಥರುಚಿಗಳೆಲ್ಲ ತನ್ನ ಮನಕ್ಕೆ ತಟ್ಟಿದಲ್ಲಿ, ಆದ ಪ್ರಸಾದವ ಮಾಡಿಕೊಟ್ಟ ಜಂಗಮವಾರು? ಅದ ಪಡೆದುಕೊಂಡ ಭಕ್ತನಾರು? ಎನಗಿದು ಚೋದ್ಯ ಚೋದ್ಯ. ಇದು ಪ್ರಸಾದಿಯ ಆಚರಣೆಯಲ್ಲ. ಮಹಾಪ್ರಸಾದಿಯ ಆಚರಣೆ ಎಂಬುದು ಇಂದ್ರಿಯಂಗಳ ವಿಷಯದಿಂ ತೋರಿದುದೆಲ್ಲಮಂ ಆಯಾ ಲಿಂಗಾರ್ಪಣೆಯಂ ಮಾಡಿ, ಆ ಪರಿಣಾಮವು ತನ್ನ ಮನವ ನಂಬಿ, ಆ ಮನೋವ್ಯಾಪಾರದಿಂದ ನಡೆವ ಮೂವತ್ತು ಮೂರುಕೋಟಿ ಇಂದ್ರಿಯ, ಅರುವತ್ತಾರುಕೋಟಿ ಕರಣಂಗಳೆಲ್ಲವಂ ಸರ್ವಕಾರಣವೆನಿಸಿದ ಆ ಪರವಸ್ತುವಿನ ಕರಣೇಂದ್ರಿಯಂಗಳೆಂದು ಭಿನ್ನ ಭಿನ್ನವಾಗಿ ಆಯಾ ಲಿಂಗಕ್ಕೆ ಸಮರ್ಪಣೆಯ ಮಾಡುವಾತನೆ ಮಹಾಪ್ರಸಾದಿಯಯ್ಯಾ, ಮಹಾಲಿಂಗ ಶಶಿಮೌಳಿ ಸದಾಶಿವ.