Index   ವಚನ - 9    Search  
 
ಸದ್ಗುರುಮೂರ್ತಿಯು ಶಿವನ ಸಂಸ್ಕಾರಸಂಬಂಧಿಯಾದವನ ಮಾಂಸಪಿಂಡವ ಕಳೆದು ಮಂತ್ರ ಪಿಂಡವ ಮಾಡುವೆನೆಂದು ತನ್ನ ಪ್ರಾಣಲಿಂಗ ಸ್ವರೂಪವಂ ಭಾವಿಸಿ, ಭಾವದಿಂದ ಧ್ಯಾನಕ್ಕೆ ತಂದು, ಧ್ಯಾನದಿಂದ ಮನಕ್ಕೆ ತಂದು, ಮನದಿಂದ ನೇತ್ರದಲ್ಲಿ ನಿಲ್ಲಿಸಿ, ಆ ಮಹಾಲಿಂಗಮೂರ್ತಿಯ ರೂಪನೆ ಶಿಲಾಮೂರ್ತಿ ಗುಂಡಿಲಿಸಿ, ಷಡಾಕ್ಷರಿಯ ಮಂತ್ರದಿಂದ ಆ ಮೂರ್ತಿಗೆ ಚೈತನ್ಯವೆನಿಸಿ, ಆ ಲಿಂಗಕ್ಕೆ ಕ್ರಿಯಾರ್ಚನೆಯಂ ಮಾಡಿ, ಇಷ್ಟಲಿಂಗವೆಂದು ಪೆಸರಿಟ್ಟು, ಇಷ್ಟ ಪ್ರಾಣ ಭಾವವೆಂದು ಪ್ರಾಣಲಿಂಗ ಒಂದೆ ನಾಮಭೇದದಿಂದ ಮೂರುತೆರನೆನಿಸಿದಂತೆ, ಆ ಶಿವಲಿಂಗಮಂ ಶಿಷ್ಯನ ಹಸ್ತಸಿಂಹಾಸನಕ್ಕೆ ಬಿಜಯಂಗೈಸಿ, ತನ್ನ ಹಸ್ತಮಸ್ತಕಸಂಯೋಗದಿಂದ ಕರ್ಣದಲ್ಲಿ ಮಂತ್ರೋಪದೇಶವಂ ಮಾಡಿ, ಜ್ಞಾನಮೌಲ್ಯವನಿತ್ತು, ನೆಲದ ಮರೆಯ ನಿಧಾನವ ಅಂಜನಸಿದ್ಧಿಯಿಂ ಕಾಬಂತೆ, ಇಷ್ಟಲಿಂಗದ ಕ್ರಿಯಾರ್ಚನೆಯಿಂದ ಗುರುಲಿಂಗಜಂಗಮ ಪಾದತೀರ್ಥ ಪ್ರಸಾದ ವಿಭೂತಿ ರುದ್ರಾಕ್ಷಿ ಷಡಾಕ್ಷರಿಮಂತ್ರವಾದಿಯಾದ ಅಷ್ಟಾವರಣವಂಗವಪ್ಪುದು. ಅದರಿಂ ನಿನ್ನ ಜ್ಞಾನೇಂದ್ರಿಯಂಗಳೆ ಲಿಂಗಸ್ವರೂಪವೆಂದು ತಿಳಿವುದು. ರೂಪಾದ ಪದಾರ್ಥಮಂ ಕಾಯದ ಕೈ ಮುಟ್ಟಿ, ಇಷ್ಟಲಿಂಗಕ್ಕೆ ಕೊಡುವುದೆ ಕ್ರಿಯಾರ್ಪಣ. ಆ ಪ್ರಾಣಲಿಂಗದ ತೃಪ್ತಿಯನೆ ಭಾವದ ಲಿಂಗದಲ್ಲಿ ಸಮರಸವ ಮಾಡೆಂದು ಗುರುನಿರೂಪಣೆಯಿಲ್ಲದೆ ಇಷ್ಟಲಿಂಗದ ಭೋಗ ಕಲ್ಪಿತ ಪೂರ್ಣಮಾದಲ್ಲಿ ಪ್ರಾಣಬಾಧೆಯ ಮಾಡೆಂದುಪದೇಶವಿತ್ತನೆ ಆಚಾರ್ಯನು. ಪರುಷ ಸೋಂಕಿದ ಲೋಹ ಸುವರ್ಣವಪ್ಪುದಲ್ಲದೆ ಮತ್ತದು ಲೋಹವಾಗಬಲ್ಲುದೆ? ಆ ಮಹಾಲಿಂಗವೆ ಸದ್ಗುರುಮೂರ್ತಿಯಾಗಿ, ಶಿಷ್ಯನ ಉತ್ತಮಾಂಗದಿ ತನ್ನ ಹಸ್ತಸ್ಪರ್ಶನವಂ ಮಾಡಿ, ಎನ್ನ ಸರ್ವಾಂಗವು ಲಿಂಗಸ್ವರೂಪವೆಂಬಲ್ಲಿ, ಲಿಂಗ ಬಾಹ್ಯನೆಂಬುದು ಜ್ಞಾನವಲ್ಲ. ಇಷ್ಟಲಿಂಗಪ್ರಾಣಿಗಳೆಂದು, ಪ್ರಾಣಲಿಂಗಸಂಬಂಧಿಗಳೆಂದು, ಭಾವಲಿಂಗ ಪರಿಣಾಮಿಗಳೆಂದು ತಮ್ಮ ಭಾವದ ನಿಜದಿಂದ ಲಿಂಗತ್ರಯವೆನಿಸಿದರೂ ಪ್ರಾಣಲಿಂಗ ಒಂದೆ. ಅಂದೆಂತೆಂದಡೆ:ರೇಚಕ ಪೂರಕ ಕುಂಭಕವೆಂದು, ಅಖಂಡಿತವಾದ ಪ್ರಾಣವಾಯುವೊಂದೆ ಮೂರುತೆರನೆನಿಸಿದಂತೆ, ಹಾಗೆ ಪರಬ್ರಹ್ಮವೆಂಬ ಮೂಲವೃಕ್ಷದಲ್ಲಿ ಋತುಕಾಲಯೋಗದಿಂದ ಪತ್ರಪುಷ್ಪಫಲಂಗಳು ತೋರಿಯಡಗುವಂತೆ, ಮಹದಾಕಾಶದಿಂದುದಯಿಸುವ ಅನೇಕ ವಿಚಿತ್ರತರವಾದ ಮೇಘಜಾಲ ಇಂದ್ರಚಾಪ ರೂಪು ವರ್ಣನಾಮ ಭಿನ್ನ ಭಿನ್ನಮಾಗಿ ತೋರಿದರು. ಆಕಾಶದಿಂದೆ ಉದಿಸಿ ಅಲ್ಲಿಯೆ ಅಡಗುವಂತೆ, ಕ್ರಿಯಾದಿಲಿಂಗದರಿವ ಆಚಾರಾದಿ ಲಿಂಗ ಪಂಚಕವು ಪ್ರಾಣಲಿಂಗದಿಂದುಂಟೆನಿಸಿ ಅಲ್ಲಿಯೆ ಐಕ್ಯಮಪ್ಪುದೆಂಬುದೆ ಮಹಾಜ್ಞಾನ. ಹಾಗಾದರೂ ತನ್ನ ಮನೋಭಾವ ಮೆಚ್ಚಿನ ನಿಜದಿಂದ ಲಿಂಗತ್ರಯವೆನಿಸುವುದು. ಇಷ್ಟಲಿಂಗವೆಂಬ ಕುರುಹೆಲ್ಲಿಯದು ಭಾವಲಿಂಗ ಪರಿಣಾಮಿಗಳಿಗೆ? ಇಷ್ಟಪ್ರಾಣವೆಂಬ ನೆನಹೆಲ್ಲಿಯದು ಮಹಾಲಿಂಗ ಶಶಿಮೌಳಿ ಸದಾಶಿವ?