ವಚನ - 41     
 
ಅತಿಗಳೆವೆ ವರ್ಗವನು ಮಥನಿಸುವೆ ಮುಕ್ತಿಯನು, ಸದಮದವ ನಿಲಿಸುವೆನು ದಿಗ್ವಳಯದಾ ಕರಣ ಸಂತತಿಗಳ ತನುಗುಣದ ಭೇದವನು, ಮನದಲ್ಲಿ ಒಪ್ಪಿಪ್ಪ ತತ್ವಂಗಳಾ ಮನೆ ಐದರ ಭೇದ ಮನಸಿಜನಿಂಬಿಲ್ಲ ಘನತರ ಮನೆ. ಐದನೊಂದ ಮಾಡಿ ತನುತ್ರಯವ ಮನತ್ರಯವ ಮಲತ್ರಯವ ಎಯ್ದದೆ ಘನತರದ ಭೇದವನು ಅನುವಾಗಿ ಎಯ್ದಿ ಗಮನವನಿರಿಸಿ ಮಧ್ಯಸ್ಥಾನದಲಿ. ಕುಶಲತೆಯ ಬಿಟ್ಟೀಗ ಎಸೆವ ಕಮಳದೊಳಗೆ ಶಶಿಧರನ ಸಾಯುಜ್ಯ ಮಂಚದಲ್ಲಿ ಕುಸುಮನೇತ್ರೆಯ ಕಂಡು ಪಸರಿ ಪರ್ಬಿದ ಸ್ನೇಹ ಒಸರುತಿರ್ದುದು ಗಿರಿಯ ಕಂದರದಲಿ ಮಧುರದೊಂದಾಳಾಪ ಒದವಿರ್ದ ಕ್ರೀಯದಲಿ ಅನಿಮಿಷದ ಶಕ್ತಿ ಶುದ್ಧ ಪಂಚಮದಲಿ ಒದಗದೆ ಎಯ್ದಿಪ್ಪ ಪರಾಶಕ್ತಿ ಮಸ್ತಕದ ಅನುನಯದ ಬೀಜಾಕ್ಷರಂಗಳೆರಡಾ ಬಳಸುತ್ತ ಚಿತ್ತವನು ಹರಿಯದೆ ನಿಲಿಸಿ, ತನುವ ವೇಧಿಸುತಿರ್ದುದಾನತದಲಿ ಶುದ್ಧ ಸಂಗಮದೊಳಗಿದ್ದು ಮೂರ್ಛೆಯನೆಯ್ದಿ ಅರ್ಧೋದಯದಲ್ಲಿ ಆನತದಲಿ ತಾನು ತನ್ನನರಿತು ಭಾನುವಿನುದಯದಲಿ ತಾರೆಗಳ ತವಕದಲಿ ವಿಯೋಗದಾ ಅಂಗಸಂಗವ ಮರೆದು, ಲಿಂಗಸುಖಸಂಯೋಗಿ ಭಂಗವಿಲ್ಲದೆ ಶುದ್ಧ ಧವಳತೆಯಲಿ ಅನುಗುಣವನತಿಗಳೆದು ಮನದ ಮಲಿನವ ಕಳೆದು, ಮನ ನಿಮ್ಮನೆಯ್ದಿತೈ ಕಪಿಲಸಿದ್ಧಮಲ್ಲಿಕಾರ್ಜುನಾ.