Index   ವಚನ - 68    Search  
 
ಅಯ್ಯಾ, ಜಗತ್ಪಾವನ ನಿಮಿತ್ಯರ್ಥವಾಗಿ ಸಾಕಾರಲೀಲೆಯ ಧರಿಸಿದ ಸ್ವಯಚರಪರಗುರುಚರಮೂರ್ತಿಗಳ ಅರ್ಪಿತಾವಧಾನದ ನಿಲುಕಡೆಯೆಂತೆಂದಡೆ: ಲಿಂಗಾಚಾರ ಮೊದಲಾದ ಸದ್ಭಕ್ತ ಶರಣಗಣಂಗಳಲ್ಲಿ ಲಿಂಗಾರ್ಪಿತಭಿಕ್ಷಲೀಲೆಯ ಧರಿಸಿ ಹೋದ ವ್ಯಾಳ್ಯದೊಳು ಆ ಭಕ್ತಗಣಂಗಳು ಶರಣುಹೊಕ್ಕು ಸಮಸ್ತ ಆಚರಣೆಯ ಒದಗಿಸಿಕೊಟ್ಟಲ್ಲಿ ದಶವಿಧ ಪಾದೋದಕ ಏಕಾದಶ ಪ್ರಸಾದದಾಚರಣೆಯಾಗುವುದಯ್ಯಾ. ಇಂತು ಲಿಂಗಾಚಾರ ಭಕ್ತಗಣಂಗಳು ದೊರೆಯದಿರ್ದಡೆ ವೇದಾಂತಿ ಸಿದ್ಧಾಂತ ಭಿನ್ನಯೋಗಿ ಮೊದಲಾದ ಸಮಸ್ತಮತದಿಂದ ಏಕಶಬ್ದಭಿಕ್ಷವ ಸಪ್ತಗೃಹವ ಬೇಡಿ ದುರ್ಗುಣಯುಕ್ತವಾದ ಅಯೋಗ್ಯದ್ರವ್ಯವನುಳಿದು ಸದ್ಗುಣಯುಕ್ತವಾದ ಯೋಗ್ಯದ್ರವ್ಯವ ಕೈಕೊಂಡು ಧೂಳಪಾದಜಲದಿಂದ ಭವಿತನವ ಕಳೆದು ಭಕ್ತಪದಾರ್ಥವೆನಿಸಿ ಅರ್ಘ್ಯಪಾದ್ಯಾಚಮನವ ಮಾಡಿ ಧಾನ್ಯವಾದಡೆ ಪರಿಣಾಮಜಲದಿಂ ಶೋಧಿಸಿ ಪಾಕವ ಮಾಡಿ, ಫಲಾಹಾರವಾದಡೆ ಶೋಧಿಸಿ ಪಕ್ವವ ಮಾಡಿಟ್ಟು ಆಮೇಲೆ, ಅಯ್ಯಾ, ನಿನಗೆ ಭಕ್ತಗಣಂಗಳು ದೊರೆಯದ ಸಮಯದಲ್ಲಿ ಚತುರ್ವಿಧ ಪಾದೋದಕವೆಂತುಟೆಂದಡೆ: ಏಕಾಂತವಾಸದಲ್ಲಿ ಪರಿಣಾಮತರವಾದ ಹಳ್ಳ ಹೊಳೆ ಕೆರೆ ಬಾವಿ ಮಡು ಹೊಂಡ ಚಿಲುಮೆ ಕೊಳ ಮೊದಲಾದ ಸ್ಥಾನಕ್ಕೆ ಹೋಗಿ ಪ್ರಥಮದಲ್ಲಿ `ಶಿವ ಶಿವ! ಹರಹರ! ಗುರುಬಸವಲಿಂಗ!' ಎಂಬ ಮಂತ್ರಧ್ಯಾನದಿಂದ ಪಾದವನಿಟ್ಟು ಚರಣಸೋಂಕಿನಿಂ ಪವಿತ್ರವಾದುದಕವೆ ಧೂಳಪಾದೋದಕವೆನಿಸುವದಯ್ಯ; ಆ ಮೇಲೆ ತಂಬಿಗೆಯೊಳಗೆ ಶೋಧಿಸಿ ಬಸವಾಕ್ಷರವ ಲಿಖಿಸುವದೆ ಗುರುಪಾದೋದಕವೆನಿಸುವದಯ್ಯ; ಆ ಮೇಲೆ ಅರ್ಚನಾಕ್ರಿಯೆಗಳ ತೀರ್ಚಿಸಿಕೊಂಡು ನಿಚ್ಚಪ್ರಸಾದಿ ಸಂಬಂಧಾಚರಣೆಯಂತೆ ಮುಗಿದಲ್ಲಿ ಜಂಗಮ ಪಾದೋದಕವೆನಿಸುವದಯ್ಯ. ಇಂತು ಚತುರ್ವಿಧ ಪಾದೋದಕದೊಳಗೆ ಷಡ್ವಿಧ ಪಾದೋದಕ ಉಂಟಯ್ಯ. ಅದೆಂತೆಂದಡೆ: ಹಸ್ತವಿಟ್ಟು ಸ್ಪರ್ಶನವ ಮಾಡೆ ಸ್ಪರ್ಶನೋದಕವೆನಿಸುವದಯ್ಯ; ಲಿಂಗಕ್ಕೆ ಧಾರೆಯಿಂದ ಅಭಿಷೇಕವ ಎರೆದಲ್ಲಿ ಅವಧಾರೋದಕವೆನಿಸುವದಯ್ಯ; ಲಿಂಗಾರ್ಪಿತವ ಮಾಡಬೇಕೆಂಬ ಆನಂದವೆ ಆಪ್ಯಾಯನೋದಕವೆಂದೆನಿಸುವದಯ್ಯ; ಅರ್ಪಿತಮುಖದಲ್ಲಿ ಹಸ್ತವ ಪ್ರಕ್ಷಾಲಿಸಿ ಖಂಡಿತವ ಮಾಡಿದಲ್ಲಿಗೆ ಹಸ್ತೋದಕವೆನಿಸುವದಯ್ಯ; ಲಿಂಗಕ್ಕೆ ಸಂತೃಪ್ತಿಪರಿಯಂತರವು ಅರ್ಪಿತವ ಮಾಡಿ[ದಲ್ಲಿ] ಪರಿಣಾಮೋದಕವೆನಿಸುವದಯ್ಯ; ತಟ್ಟೆ ಬಟ್ಟಲ ಲೇಹವ ಮಾಡಿದಲ್ಲಿ ನಿರ್ನಾಮೋದಕವೆನಿಸುವದಯ್ಯ; ಲೇಪವ ಮಾಡಿದ ಮೇಲೆ ದ್ರವ್ಯವನಾರಿಸಿ ಸರ್ವಾಂಗದಲ್ಲಿ ಲೇಪಿಸುವುದೆ ಸತ್ಯೋದಕವೆನಿಸುವದಯ್ಯ. ಇಂತೀ ದಶವಿಧ ಪಾದೋದಕದ ವಿಚಾರವ ತಿಳಿದು ಆ ಮೇಲೆ ನಿಚ್ಚಪ್ರಸಾದಿಯ ಸಂಬಂಧಾಚರಣೆಯಂತೆ ಪ್ರಸಾದವ ಮುಗಿವದಯ್ಯ. ಅದರೊಳಗೆ ಏಕಾದಶಪ್ರಸಾದದ ವಿಚಾರವೆಂತೆಂದಡೆ: ಪ್ರಥಮದಲ್ಲಿ ಹಸ್ತಸ್ಪರ್ಶ ಮಾಡಿದಂತಹದೆ ಗುರುಪ್ರಸಾದವೆನಿಸುವದಯ್ಯ; ಇಷ್ಟ ಮಹಾಲಿಂಗಕ್ಕೆ ಮಂತ್ರಸ್ಮರಣೆಯಿಂದ ಮೂರು ವೇಳೆ ರೂಪನರ್ಪಿಸಿದಲ್ಲಿಗೆ ಲಿಂಗಪ್ರಸಾದವೆನಿಸುವದಯ್ಯ; ಎರಡು ವೇಳೆ ಇಷ್ಟಮಹಾಲಿಂಗದೇವಂಗೆ ರೂಪನರ್ಪಿಸಿ ಜಿಹ್ವೆಯಲ್ಲಿಟ್ಟಲ್ಲಿ ಜಂಗಮ ಪ್ರಸಾದವೆನಿಸುವದಯ್ಯ; ಆ ಮೇಲೆ ಲಿಂಗದೇವಂಗೆ ತೋರಿ ಜೋಜೆಗಟ್ಟಿ ಲಿಂಗದೇವಂಗೆ ತೋರಿ ಜಿಹ್ವೆಯಲ್ಲಿಟ್ಟಂತಹದೆ ಪ್ರಸಾದಿಯ ಪ್ರಸಾದವೆನಿಸುವದಯ್ಯ; ಆ ಭೋಜ್ಯರೂಪಾದ ಪ್ರಸಾದಿಯ ಪ್ರಸಾದದೊಳಗೆ ಮಧುರ ಒಗರು ಕಾರ ಆಮ್ಲ ಕಹಿ ತೃಪ್ತಿ-ಮಹಾತೃಪ್ತಿಯೆ ಆಪ್ಯಾಯನ, ಸಮಯ, ಪಂಚೇಂದ್ರಿಯವಿರಹಿತ, ಕರಣಚತುಷ್ಟಯವಿರಹಿತ, ಸದ್ಭಾವ, ಸಮತೆ, ಜ್ಞಾನಪ್ರಸಾದ ಮೊದಲಾದವು ಸಪ್ತವಿಧಪ್ರಸಾದವೆನಿಸುವದಯ್ಯ. ಇಂತು ಪರಾಧೀನತೆಯಿಂ ಭಿಕ್ಷವ ಬೇಡಲಾರದಿರ್ದಡೆ, ಅರಣ್ಯದಲ್ಲಿ ಫಲರಸಯುಕ್ತವಾದ ಹಣ್ಣು ಕಾಯಿಗಳ ಲಿಂಗಾರ್ಪಿತ ಭಿಕ್ಷಾಯೆಂದು ಆ ಫಲಾದಿಗಳ ತೆಗೆದುಕೊಂಡು ಶೋಧಿಸಿ, ಪವಿತ್ರವ ಮಾಡಿ ಲಿಂಗಾರ್ಪಿತ ಭೋಗಿಯಾದಾತನೆ ಸ್ವಯಂಭು ಪ್ರಸಾದ ಭಕ್ತನಾದ ಚಿತ್ಕಲಾಪ್ರಸಾದಿ ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ.