ವಚನ - 1133     
 
ಹಿಂದೆ ಪರೀಕ್ಷಿಸಿ ತಿಳಿದು ನೋಡುವಡೆ, ಪರಿಯಾಯ ಪರಿಯಾಯದಿಂದ ಬಂದಂಗವ ನೀ ಬಲ್ಲೆ ಬಸವಣ್ಣಾ. ನಾ ನೊಂದ ನೋವನು ನೀ ಬಲ್ಲೆ ಬಸವಣ್ಣಾ. ನಾನಂದು ಕಾಲನ ಕಮ್ಮಟಕ್ಕೆ ಗುರಿಯಾಗಿ ಇಪ್ಪಂದು ನೀನು ಶೂನ್ಯರುದ್ರನು ಬಸವಣ್ಣಾ. ನಾನಂದು ಹಲವು ಪರಿಯ ಬಹುರೂಪನಾಡುವಲ್ಲಿ ನೀನು ವಿಚಿತ್ರವಿನೋದನೆಂಬ ಗಣೇಶ್ವರನು ಬಸವಣ್ಣಾ, ಎನ್ನಾದ್ಯಂತವ ನೀ ಬಲ್ಲೆ. ಬಲ್ಲ ಕಾರಣ ಎನ್ನ ಪಾಲಿಸಿದೆ ಬಸವಣ್ಣಾ. ನೀ ಪಾಲಿಸಿದ ಗುಣದಿಂದ ಪಾವನನಾದೆನು ಬಸವಣ್ಣಾ; ಶುದ್ಧ ಸಿದ್ಧ ಪ್ರಸಿದ್ಧವನರಿದೆ ಬಸವಣ್ಣಾ. ಎಲೆ ಗುರುವೆ ಬಸವಣ್ಣಾ, ನೀ ಪಾಲಿಸಿದ ಗುಣದಿಂದ ಜೀವನ್ಮುಕ್ತನಾದ: ಕಪಿಲಸಿದ್ಧಮಲ್ಲಿಕಾರ್ಜುನಯ್ಯನ ಕೂಡಿ, ನಿನ್ನವರಿಗೆಯೂ ನಿನಗೆಯೂ ಯೋಗ್ಯನಾದೆ ಬಸವಣ್ಣಾ.