ವಚನ - 1382     
 
ಜ್ಞಾನವೆಂದು ವಿವಾದಿಸುವ ಅಣ್ಣಗಳಿರಾ, ಕೇಳಿರಯ್ಯಾ: ಜ್ಞಾನವೆಂದಡೆ ಮಹತ್ವಗಳ ಮಾಡಿ ಮೆರೆದುದು ಜ್ಞಾನವೆ? ಅಲ್ಲಲ್ಲ. ಜ್ಞಾನವೆಂದಡೆ ಸ್ವರ್ಗದ ವಾರ್ತೆಯ ಕೇಳಿ ಕೀರ್ತಿಯ ಹಬ್ಬಿದುದು ಜ್ಞಾನವೆ? ಅಲ್ಲಲ್ಲ. ಜ್ಞಾನವೆಂದಡೆ ತತ್ಕಾಲಕ್ಕಾಗುವ ಸುಖದುಃಖಗಳ ಹೇಳಿದುದು ಜ್ಞಾನವೆ? ಅಲ್ಲಲ್ಲ. ಇವೆಲ್ಲಾ ಸಾಧನೆಯ ಮಾತು. ಅಘೋರಮುಖದಿಂದ ಹುಟ್ಟಿದ ಮಂತ್ರಂಗಳೆಲ್ಲಾ, ಜಪಿಸಿದಲ್ಲಿ ಮಹತ್ವಗಳಾದವು. ಸೂಕ್ಷ್ಮತಂತ್ರವ ಗಣಿಸಿದಲ್ಲಿ ಸ್ವರ್ಗದ ವಾರ್ತೆಯ ಹೇಳಿದನು. ಪ್ರಸಂಗಚಿಂತಾಮಣಿಯ ನೋಡಿ ಸುಖದುಃಖಂಗಳ ಹೇಳಿದನು. ಇವೆಲ್ಲಾ ಪರಸಾಧನೆಯಯ್ಯಾ. ನಿನ್ನರಿವು ಕೈಕರಣವಾಗಿರೆ ದೇಹವಳಿದಡೇನು, ದೇಹ ಧರಿಸಿ ಬಂದಡೇನು? ಎಲೆ ಅಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನಾ.