ವಚನ - 1499     
 
ಕುಲಮದ ಪೊತ್ತಲ್ಲಿ ಚಂಡಾಲಗಿತ್ತಿಯಾಗಿ ಕೆಡಿಸಿತ್ತು ಮಾಯೆ, ಮಯೂರನೃಪಗೆ. ಛಲಮದ ಪೊತ್ತಲ್ಲಿ ಮಾಂಸ ಭೋಗಿಸಿತ್ತು ಮಾಯೆ, ವೀರ ವಿಕ್ರಮಗೆ. ಧನಮದ ಪೊತ್ತಲ್ಲಿ ದರಿದ್ರವಾಗಿ ಕಾಡಿತ್ತು ಮಾಯೆ, ಹರಿಶ್ಚಂದ್ರಂಗೆ, ರೂಪಮದ ಪೊತ್ತಲ್ಲಿ ಕುರೂಪನ ಮಾಡಿತ್ತು ಮಾಯೆ, ನಳಂಗೆ. ಯೌವನಮದ ಪೊತ್ತಲ್ಲಿ ಹಿಡಿಂಬಿಯಾಗಿ ಕಾಡಿತ್ತು ಮಾಯೆ, ಭೀಮಂಗೆ. ವಿದ್ಯಾಮದ ಪೊತ್ತಲ್ಲಿ ಅಜ್ಞಾನವಾಗಿ ಕಾಡಿತ್ತು ಮಾಯೆ, ಅಂದು ಪರ್ವತದಲ್ಲಿ ಕವಿ ವಾದಿಶೇಖರಂಗೆ. ರಾಜಮದ ಪೊತ್ತಲ್ಲಿ ರಾಕ್ಷಸನ ಮಾಡಿತ್ತು ಮಾಯೆ, ಮುಮ್ಮಡಿ ಸಿಂಗನೃಪಂಗೆ. ತಪೋಮದ ಪೊತ್ತಲ್ಲಿ ಹಲವು ಆಗಿ ಕಾಡಿತ್ತು ಮಾಯೆ, ವಿಶ್ವಾಮಿತ್ರಂಗೆ. ಇಂತೀ ಅಷ್ಟಮದವಳಿದು ಅಷ್ಟಾವರಣ ಧರಿಸಿಪ್ಪ ಮಹಾಗಣಂಗಳು ಲಯವಿಲ್ಲದ ರಾಜಯೋಗವ ಪಡೆದಿಹರಯ್ಯಾ. ಕಪಿಲಸಿದ್ಧಮಲ್ಲಿಕಾರ್ಜುನಾ.