ವಚನ - 1737     
 
ಸಮತೆಯೆಂಬ ಕಂಥೆಯ ಧರಿಸಿಪ್ಪ ನೋಡಾ ಜಂಗಮನು. ಅಮಿತವೆಂಬ ಭಸ್ಮವ ಧರಿಸಿಪ್ಪ ನೋಡಾ ಜಂಗಮನು. ಲಿಂಗವೆಂಬ ಕರ್ಪರವ ಕರಸ್ಥಲದಲ್ಲಿ ಧರಿಸಿಪ್ಪ ನೋಡಾ ಜಂಗಮನು. ಸರ್ವಜೀವ ದಯಾಪಾರಿಯೆಂಬ ವಿಮಲ ರುದ್ರಾಕ್ಷಿಯ ಧರಿಸಿಪ್ಪ ನೋಡಾ ಜಂಗಮನು. ನಿರ್ಮೋಹವೆಂಬ ಕೌಪೀನವ ಧರಿಸಿಪ್ಪ ನೋಡಾ ಜಂಗಮನು. ನಿಸ್ಸಂಗವೆಂಬ ಮೇಖಲಾಪರಿಪೂರ್ಣ ನೋಡಾ ಜಂಗಮನು. ಸುಮ್ಮಾನವೆ ಕಿರೀಟವಾಗಿ, ಶುದ್ಧ ಜ್ಞಪ್ತಿಯೆ ಮುಕುಟವಾಗಿ, ನಿರಹಂಕಾರವೆ ಬಹಿರ್ವಾಸವಾಗಿ, ದುವ್ರ್ಯಸನ ದುರ್ಭ್ರಮೆ ಹೃಷೀಕೋತ್ಪಾತವಿಜಯ ಶಿವಯೋಗವಾಗಿ, ಚರಿಸುವನು ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನನೆಂಬ ಮಹಾಜಂಗಮನು.