ವಚನ - 1959     
 
ಎನ್ನ ಮಸ್ತಕದಲ್ಲಿ ಹಕಾರವಾಗಿದ್ದಾತ ಪ್ರಭುದೇವ. ಎನ್ನ ಲಲಾಟದಲ್ಲಿ ಓಂಕಾರವಾಗಿದ್ದಾತ ಚೆನ್ನಬಸವ. ಎನ್ನ ಘ್ರಾಣದಲ್ಲಿ ನಕಾರವಾಗಿದ್ದಾತ ಮಡಿವಾಳಯ್ಯ. ಎನ್ನ ಬಾಯಿಯಲ್ಲಿ ಮಕಾರವಾಗಿದ್ದಾತ ಮರುಳು ಶಂಕರಯ್ಯ. ಎನ್ನ ನೇತ್ರದಲ್ಲಿ ಶಿಕಾರಕಾರವಾಗಿದ್ದಾತ ಬಸವ. ಎನ್ನ ಕಪೋಲದಲ್ಲಿ ವಕಾರವಾಗಿದ್ದಾತ ಪಡಿಹಾರಿ ಬಸವಯ್ಯ. ಎನ್ನ ಶ್ರೋತ್ರದಲ್ಲಿ ಯಕಾರವಾಗಿದ್ದಾತ ಹಡಪದಪ್ಪಣ್ಣ. ಎನ್ನ ಜಿಹ್ವೆಯಲ್ಲಿ ಹ್ರೀಂಕಾರವಾಗಿದ್ದಾಕೆ ಅಕ್ಕನಾಗಮ್ಮ. ಎನ್ನ ಸರ್ವಾಂಗದಲ್ಲಿ ಸಕಲ ಪ್ರಣವರೂಪಾಗಿದ್ದಾತ ಗುರುವಿನ ಗುರು ಚೆನ್ನಬಸವನ ಪಾದಕ್ಕೆ ನಮೋ ನಮೋ ಎಂಬೆನಯ್ಯಾ ಕಪಿಲಸಿದ್ಧಮಲ್ಲಿಕಾರ್ಜುನಾ.