ನಿಮ್ಮ ಭಕ್ತರ ಕಂಡು ಉದಾಸೀನವ
ಮಾಡಿದರೆ ಒಂದನೆಯ ಪಾತಕ.
ನಿಮ್ಮ ಭಕ್ತರ ಸಮಯೋಚಿತವ
ನಡೆಸದಿದ್ದರೆ ಎರಡನೆಯ ಪಾತಕ.
ನಿಮ್ಮ ಭಕ್ತರೊಡನೆ ಮಾರುತ್ತರವ
ಕೊಟ್ಟರೆ ಮೂರನೆಯ ಪಾತಕ.
ನಿಮ್ಮ ಭಕ್ತರ ಸಕಳಾರ್ಥಕ್ಕೆ
ಸಲ್ಲದಿದ್ದರೆ ನಾಲ್ಕನೆಯ ಪಾತಕ.
ನಿಮ್ಮ ಭಕ್ತರಿಗೆ ಮಾಡಿದೆನೆಂದು
ಮನದಲ್ಲಿ ಹೊಳೆದರೆ ಐದನೆಯ ಪಾತಕ.
ಇಂತೀ ಪಂಚಪಾತಕವ ಕಳೆದುಳಿದ
ಕೂಡಲಚೆನ್ನಸಂಗಾ ನಿಮ್ಮ ಶರಣ.