Index   ವಚನ - 288    Search  
 
ಶಿಷ್ಯನ ಪೂರ್ವಾಶ್ರಯವ ಗುರು ಕಳೆದನೆಂಬರು, ಆ ನುಡಿಯ ಕೇಳಲಾಗದು. ಗುರುವಿನ ಪೂರ್ವಾಶ್ರಯವ ಶಿಷ್ಯ ಕಳೆವನಲ್ಲದೆ, ಶಿಷ್ಯನ ಪೂರ್ವಾಶ್ರಯವ ಗುರು ಕಳೆಯಲರಿಯ. ಶರಣನ ಪೂರ್ವಾಶ್ರಯವ ಲಿಂಗ ಕಳೆಯಿತ್ತೆಂಬರು, ಆ ನುಡಿಯ ಕೇಳಲಾಗದು. ಲಿಂಗದ ಪೂರ್ವಾಶ್ರಯವ ಶರಣ ಕಳೆವನಲ್ಲದೆ, ಆ ಶರಣನ ಪೂರ್ವಾಶ್ರಯವ ಲಿಂಗವು ಕಳೆಯಲರಿಯದು. ಭಕ್ತನ ಪೂರ್ವಾಶ್ರಯವ ಜಂಗಮ ಕಳೆಯಿತ್ತೆಂಬರು ಆ ನುಡಿಯ ಕೇಳಲಾಗದು. ಜಂಗಮದ ಪೂರ್ವಾಶ್ರಯವ ಭಕ್ತ ಕಳೆವನಲ್ಲದೆ, ಆ ಭಕ್ತನ ಪೂರ್ವಾಶ್ರಯವ ಜಂಗಮ ಕಳೆಯಲರಿಯ. ಪ್ರಸಾದಿಯ ಪೂರ್ವಾಶ್ರಯವ ಪ್ರಸಾದ ಕಳೆಯಿತ್ತೆಂಬರು ಆ ನುಡಿಯ ಕೇಳಲಾಗದು, ಪ್ರಸಾದದ ಪೂರ್ವಾಶ್ರಯವ ಪ್ರಸಾದಿ ಕಳೆವನಲ್ಲದೆ ಆ ಪ್ರಸಾದಿಯ ಪೂರ್ವಾಶ್ರಯವ ಪ್ರಸಾದ ಕಳೆಯಲರಿಯದು. ಆ ಪ್ರಸಾದದ ಪೂರ್ವಾಶ್ರಯವ ಕಳೆಯಲಿಕಾಗಿ ಮಹಾಪ್ರಸಾದಿಯಾದ ಕೂಡಲಚೆನ್ನಸಂಗಾ ನಿಮ್ಮ ಶರಣ.