Index   ವಚನ - 335    Search  
 
ಶ್ರೋತ್ರ ನೇತ್ರ ತ್ವಕ್ಕು ಜಿಹ್ವೆ ಘ್ರಾಣೇಂದ್ರಿಯಂಗಳ ಕೂಡಿಕೊಂಡು ಚೇಷ್ಟಿಸುವ ದಶವಾಯುಗಳಾವುವೆಂದರೆ: ರೇಚಕ ಪೂರಕ ಕುಂಭಕ ರೂಪಿಂದ ಚೇಷ್ಟಿಸೂದೊಂದು ಪ್ರಾಣವಾಯು, ರಸಂಗಳ ನೀರಸಂಗಳ ಮಾಡಿ ಮಲಮೂತ್ರಂಗಳ ನಡಸೂದೊಂದಪಾನವಾಯು ಅನ್ನರಸವಂ ಪಿಡಿದು ತನುವಂ ವ್ಯಾಪಿಸಿ ಪಸರಿಸೂದೊಂದು ವ್ಯಾನವಾಯು, ಪಾದವ ನೆಲಕ್ಕಿಕ್ಕಿಸೂದೊಂದು ಉದಾನವಾಯು. ಸಮಧಾತುಗಳನರಿದು ಅನ್ನಪಾನಂಗಳ ಪಸರಿಸೂದೊಂದು ಸಮಾನವಾಯು. ರಸವ್ಯಾಪ್ತಿಯ ಮಾಡೂದೊಂದು ನಾಗವಾಯು, ಘರವಟ್ಟಿಗೆಯ ತೊಳಲೂದೊಂದು ಕೂರ್ಮವಾಯು ಆಗುಳಿಕೆ ಸೀನು ಮೈಮುರಿವುದೊಂದು ಕೃಕರವಾಯು, ಓಕರಿಕೆಯ ಮಾಡೂದೊಂದು ದೇವದತ್ತವಾಯು, ನುಡಿಯ ಬುದ್ಧಿಯ ಮಾಡಿ ನಡಸೂದೊಂದು ಧನಂಜಯವಾಯು. ಇಂತು ದಶವಾಯುಗಳು ಇಹ ಸ್ಥಾನವಾವುದೆಂದರೆ: ಗುಹ್ಯದಲ್ಲಿ ಅಪಾನವಾಯು, ನಾಭಿಯಲ್ಲಿ ಸಮಾನವಾಯು, ಹೃದಯದಲ್ಲಿ ಪ್ರಾಣವಾಯು, ಕಂಠದಲ್ಲಿ ಉದಾನವಾಯು, ಸಮಸ್ತ ಸಂದುಗಳಲ್ಲಿ ವ್ಯಾನವಾಯು, ಈಡಾನಾಳದಲ್ಲಿ ನಾಗವಾಯು, ಪಿಂಗಳನಾಳದಲ್ಲಿ ಕೂರ್ಮವಾಯು, ಸುಷುಮ್ನಾನಾಳದಲ್ಲಿ ಕೃಕರವಾಯು, ಹಸ್ತದಲ್ಲಿ ದೇವದತ್ತವಾಯು, ಜಿಹ್ವೆಯಲ್ಲಿ ಧನಂಜಯವಾಯು. ಈ ವಾಯುಪ್ರಾಣಿಯ ಕಳೆದು, ಲಿಂಗಪ್ರಾಣಿಯ ಮಾಡಬಲ್ಲರೆ ಕೂಡಲಚೆನ್ನಸಂಗಯ್ಯನಲ್ಲಿ ಅದೇ ಯೋಗ.