Index   ವಚನ - 397    Search  
 
ಪಾತಕೇ ಸಮನು ಪ್ರಾಪ್ತೇ ಶಿವಲಿಂಗಂ ಪ್ರಪೂಜಯೇತ್ ಅಥವಾ ಪೂರ್ವಕರ್ಮಾಣಾಂ ತತ್ಪೂಜಾ ನಿಷ್ಫಲಾ ಭವೇತ್' ಎಂಬುದನರಿದು ಸ್ನಾನ ಧ್ಯಾನ ಜಪ ಹೋಮಾದಿ ಕ್ರೀಗಳು ನಿಮ್ಮ ಶರಣಂಗಿಲ್ಲ, ಅನ್ಯವನರಿಯನಾಗಿ. ಅನ್ಯಕಾರ್ಯ ಅನರ್ಪಿತ ನಿಮ್ಮ ಶರಣಂಗಿಲ್ಲ, ಲಿಂಗವನಗಲಿ ಇರನಾಗಿ. ಆಗಮೋಕ್ತವಹ ಅರ್ಚನೆ ಪೂಜನೆ ಆಹ್ವಾನ ವಿಸರ್ಜನೆ ಷೋಡಶೋಪಚಾರ ನ್ಯಾಸಮುದ್ರೆಗಳು ಇವು ನಿಮ್ಮ ಶರಣಂಗಿಲ್ಲ, ಪೂಜೆಗವಸಾನವಿಲ್ಲಾಗಿ. ಇಂತಪ್ಪ ಭಕ್ತಿಯ ಪಥದ ನಿಲವನರಿದ ಕಾರಣ ಭವವಿಲ್ಲ ಬಂಧನವಿಲ್ಲ ಮೋಕ್ಷವಿಲ್ಲ. ಕೂಡಲಚೆನ್ನಸಂಗಯ್ಯಾ ನಿಮ್ಮ ಶರಣನು ದಾಸೋಹಿಯಾದ ಕಾರಣ ಸರ್ವಾಂಗಲಿಂಗಿ.