ಗುರುಲಿಂಗಜಂಗಮಪ್ರಸಾದ ಪ್ರಾಣಪ್ರವೇಶವಾದುದಾಗಿ
ಲಿಂಗಪ್ರಾಣದೊಳಗೆ ಪ್ರಾಣಲಿಂಗ ನೋಡಾ.
ಭಕ್ತಕಾಯದೊಳಗೆ ಪ್ರಸಾದಕಾಯ ನೋಡಾ.
ವಿಶ್ವತೋ ಚಕ್ಷುವಿನೊಳಗೆ ಜ್ಞಾನಚಕ್ಷು ನೋಡಾ.
ವಿಶ್ವತೋ ಮುಖದೊಳಗೆ ಸುಮುಖ ನೋಡಾ.
ವಿಶ್ವತೋ ಬಾಹುವಿನೊಳಗೆ ನಮಸ್ಕಾರ ಬಾಹು ನೋಡಾ.
ವಿಶ್ವತೋ ಪಾದದಲ್ಲಿ ನಿಂದ ಮಹತ್ಪಾದ ನೋಡಾ.
ಇಂತಾದುದಾಗಿ,
ಲಿಂಗವ ಮನದಲ್ಲಿ ನೆನೆದು ಲಿಂಗಕ್ಕೆ ನೆನೆಯಲಿತ್ತು,
ಪ್ರಸಾದವ ಮನದಲ್ಲಿ ನೆನೆದು ಪ್ರಸಾದಿ ಪರಿಣಾಮಿಸುವ,
ಲಿಂಗವ ದೃಷ್ಟಿಯಲ್ಲಿ ನೋಡಿ ಲಿಂಗಕ್ಕೆ ನೋಡಲಿತ್ತು,
ಪ್ರಸಾದನಯನದಿಂದ ನೋಡಿ,
ನಯನಪ್ರಸಾದವ ನಯನದಿಂದ ನೋಡಿಸಿ,
ಪರಿಣಾಮಿಸುವ.
ಲಿಂಗವ ಶ್ರೋತ್ರದಿ ಕೇಳಿ ಲಿಂಗಕ್ಕೆ ಕೇಳಲಿತ್ತು,
ಪ್ರಸಾದ ಶ್ರೋತ್ರದಿಂ ಶಬ್ದಪ್ರಸಾದಿ ಕೇಳಿ ಪರಿಣಾಮಿಸುವ.
ಲಿಂಗ[ವ] ಸ್ಪರುಶನದಿಂ ಸ್ಪರುಶಿಸಿ ಲಿಂಗಕ್ಕೆ ಪರುಶಿಸಲಿತ್ತು,
ಪ್ರಸಾದ ಸ್ಪರುಶನದಿಂ ಸ್ಪರುಶಿಸಿ ಸ್ಪರುಶನಪ್ರಸಾದವ
ಪ್ರಸಾದಿ ಭೋಗಿಸಿ ಪರಿಣಮಿಸುವ.
ಲಿಂಗ ಜಿಹ್ವೆಯಿಂದ ಮಹಾರುಚಿಯ ರುಚಿಸಿ
ಲಿಂಗಕ್ಕೆ ರುಚಿಸಲಿತ್ತು
ಪ್ರಸಾದಜಿಹ್ವೆಯಿಂ ಮಹಾರುಚಿಯ ರುಚಿಸಿ ರುಚಿಪ್ರಸಾದವ
ಪ್ರಸಾದಿ ಭೋಗಿಸಿ ಪರಿಣಾಮಿಸುವ.
ಇಂತು ಸರ್ವಭೋಗದ್ರವ್ಯದ ಲಿಂಗಕಾಯದಿಂ
ಭೋಗಿಸಿ ಲಿಂಗಕ್ಕೆ ಭೋಗಿಸಲಿತ್ತು,
ಪ್ರಸಾದಕಾಯದಿಂ ಸರ್ವಭೋಗವನೂ
ಭೋಗಿಸುವವ ಪ್ರಸಾದಿ.
ಇದು ಕಾರಣ, ಭಕ್ತದೇಹಿಕದೇವ
ಕೂಡಲಚೆನ್ನಸಂಗಮದೇವನೆಂದರಿದು
ಪ್ರಸಾದಿಯ ಪ್ರಸಾದಿಯಾದೆನಯ್ಯಾ.
Art
Manuscript
Music
Courtesy:
Transliteration
Guruliṅgajaṅgamaprasāda prāṇapravēśavādudāgi
liṅgaprāṇadoḷage prāṇaliṅga nōḍā.
Bhaktakāyadoḷage prasādakāya nōḍā.
Viśvatō cakṣuvinoḷage jñānacakṣu nōḍā.
Viśvatō mukhadoḷage sumukha nōḍā.
Viśvatō bāhuvinoḷage namaskāra bāhu nōḍā.
Viśvatō pādadalli ninda mahatpāda nōḍā.
Intādudāgi,
liṅgava manadalli nenedu liṅgakke neneyalittu,
prasādava manadalli nenedu prasādi pariṇāmisuva,
liṅgava dr̥ṣṭiyalli nōḍi liṅgakke nōḍalittu,
prasādanayanadinda nōḍi,
nayanaprasādava nayanadinda nōḍisi,
Pariṇāmisuva.
Liṅgava śrōtradi kēḷi liṅgakke kēḷalittu,
prasāda śrōtradiṁ śabdaprasādi kēḷi pariṇāmisuva.
Liṅga[va] sparuśanadiṁ sparuśisi liṅgakke paruśisalittu,
prasāda sparuśanadiṁ sparuśisi sparuśanaprasādava
prasādi bhōgisi pariṇamisuva.
Liṅga jihveyinda mahāruciya rucisi
liṅgakke rucisalittu
prasādajihveyiṁ mahāruciya rucisi ruciprasādava
prasādi bhōgisi pariṇāmisuva.
Intu sarvabhōgadravyada liṅgakāyadiṁ
bhōgisi liṅgakke bhōgisalittu,
prasādakāyadiṁ sarvabhōgavanū
bhōgisuvava prasādi.
Idu kāraṇa, bhaktadēhikadēva
kūḍalacennasaṅgamadēvanendaridu
prasādiya prasādiyādenayyā.
ಸ್ಥಲ -
ಪ್ರಾಣಲಿಂಗಿಯ ಪ್ರಸಾದಿಸ್ಥಲ