Index   ವಚನ - 726    Search  
 
ಕಾಯದ ಕೊನೆಯ ಮೊನೆಯ ಮೇಲಣ ಲಿಂಗವ [ಇಷ್ಟ]ಲಿಂಗವೆಂದು ಪೂಜಿಸುವರು, ಜೀವದ ಕೊನೆಯ ಮೊನೆಯ ಮೇಲಣ ಲಿಂಗವ ಪ್ರಾಣಲಿಂಗವೆಂದೆಂಬರು, ಭಾವದ ಕೊನೆಯ ಮೊನೆಯ ಮೇಲಣ ಲಿಂಗವ [ಭಾವ]ಲಿಂಗವೆಂದು ಪೂಜಿಸುವರು. ಕಾಯ ಲಿಂಗವೆಂದು ಪೂಜಿಸುವ ಖಂಡಿತರನೇನೆಂಬೆ? ಜೀವ ಲಿಂಗವೆಂದು ಪೂಜಿಸುವ ಉಪಜೀವಿಗಳನೇನೆಂಬೆ? ಭಾವ ಲಿಂಗವೆಂದು ಪೂಜಿಸುವ ಭ್ರಮಿತರನೇನೆಂಬೆ? ಕಾಯ ಲಿಂಗವೇ? ಅಲ್ಲ, ಜೀವ ಲಿಂಗವೇ? ಅಲ್ಲ, ಭಾವ ಲಿಂಗವೇ? ಅಲ್ಲ, "ಅದೃಶ್ಯೇ ಭಾವನಾ ನಾಸ್ತಿ ದೃಶ್ಯಮೇವ ವಿನಶ್ಯತಿ| ಅವರ್ಣಮಕ್ಷರಂ ಬ್ರಹ್ಮ ಕಥಂ ಧ್ಯಾಯಂತಿ ಯೋಗಿನಃ"|| ಎಂದುದಾಗಿ- ಇಷ್ಟಲಿಂಗವ ಪೂಜಿಸಿ ದೃಷ್ಟಲಿಂಗದಲ್ಲಿ ನೆರೆಯಬಲ್ಲರೆ ಕೂಡಲಚೆನ್ನಸಂಗಯ್ಯಾ, ಅವರ ಸರ್ವಾಂಗಲಿಂಗಿಗಳೆಂಬೆನು.