Index   ವಚನ - 744    Search  
 
ಕಿಂಕುರ್ವಾಣತೆಯಿಂದ ಬಂದ ಜಂಗಮವೆ ಲಿಂಗವೆಂದು ಉಳ್ಳುದನರಿದು ಮನಸಹಿತ ಮಾಡುವಲ್ಲಿ ಭಕ್ತ. ನಿಷ್ಠೆ ನಿಬ್ಬೆರಸಿ ಗಟ್ಟಿಗೊಂಡು ಅಭಿಲಾಷೆಯ ಸೊಮ್ಮು ಸಮನಿಸದೆ ಪರಿಚ್ಛೇದ ಬುದ್ಧಿಯುಳ್ಳಲ್ಲಿ ಮಾಹೇಶ್ವರ. ಅನರ್ಪಿತ ಸಮನಿಸದೆ, ಬಂದುದ ಕಾಯದ ಕರಣದ ಕೈಯಲು ಕೊಟ್ಟು, ಲಿಂಗಸಹಿತ ಭೋಗಿಸುವಲ್ಲಿ ಪ್ರಸಾದಿ. ಪ್ರಾಣಕ್ಕೆ ಪ್ರಾಣವಾಗಿ ಇದ್ದುದನು ಕಾಯಸ್ಥಿತಿಯರಿದು ಎಚ್ಚರಿಕೆಗುಂದದಿಪ್ಪಲ್ಲಿ ಪ್ರಾಣಲಿಂಗಸಂಬಂಧಿ. ತನಗೆ ಲಿಂಗವಾಗಿ, ಲಿಂಗಕ್ಕೆ ತಾನಾಗಿ ಬೆಚ್ಚು ಬೇರಿಲ್ಲದ ಬೆಡಗಿನ ಒಲುಮೆಯಲ್ಲಿ ಶರಣ. ಸದಾಚಾರ ಸಂಪತ್ತಿನಲ್ಲಿ ಬಂದ ಅನುಭಾವವ ಮೀರಿ ಹೆಸರಡಗಿದ ಸುಖವದು ಲಿಂಗೈಕ್ಯ. ಇದು ಕಾರಣ, ಕೂಡಲಚೆನ್ನಸಂಗನಲ್ಲಿ ಬಸವಣ್ಣಂಗಲ್ಲದೆ ಷಡುಸ್ಥಲವಪೂರ್ವ.