Index   ವಚನ - 879    Search  
 
ಅಂಗದ ಮೇಲೆ ಲಿಂಗಸಾಹಿತ್ಯವನುಳ್ಳ ನಿಜವೀರಶೈವ ಸಂಪನ್ನರು ತಮ್ಮ ಸ್ವಯಾಂಗಲಿಂಗವನರ್ಚಿಸುವಲ್ಲಿ ಭವಿಶೈವ ಭಿನ್ನ ಕರ್ಮಿಗಳಂತೆ ಅಂಗನ್ಯಾಸ ಪಂಚಮಶುದ್ಧಿ ಮೊದಲಾದ ಅಶುದ್ಧಭಾವವಪ್ಪ ಕ್ಷುದ್ರ ಕರ್ಮಂಗಳ ಹೊದ್ದಲಾಗದು. ಅದೆಂತೆಂದೊಡೆ: "ನಕಾರಮಾತ್ಮಶುದ್ಧಿಶ್ಚ ಮಕಾರಂ ಸ್ನಾನಶೋಧನಂ ಶಿಕಾರಂ ಲಿಂಗ ಶುದ್ಧಿಶ್ಚ ವಾಕಾರಂ ದ್ರವ್ಯಶೋಧನಂ ಯಕಾರಂ ಮಂತ್ರಶುದ್ಧಿಶ್ಚ ಪಂಚಮಶುದ್ಧಿಃ ಪ್ರಕೀರ್ತಿತಾಃ ಕಾಯಶುದ್ಧಿಶ್ಯಾತ್ಮಶುದ್ಧಿಶ್ಚಾಂಗನ್ಯಾಸಕರಸ್ಯ ಚ ಸರ್ವಶುದ್ಧಿರ್ಭವೇ ನಿತ್ಯಂ ಲಿಂಗಧಾರಣಮೇವ ಚ"- ಇಂತೆಂದುದಾಗಿ, ಅವಲ್ಲದೆ ಅರ್ಘ್ಯ ಪಾದ್ಯ ಆಚಮನಂಗಳು ಮೊದಲಾದ ಉಪಪಾತ್ರಗಳಲ್ಲಿ ಅಗಣಿತಂಗೆ ಅಳತೆಯ ನೀರನೆರೆದು ಸುಖಮುಖಾರ್ಪಿತಕ್ಕೆ ಸಲುವ ಸುರಸದ್ರವ್ಯಂಗಳಪ್ಪ ಪಂಚಾಮೃತಂಗಳ ನಿರ್ಮಲನಪ್ಪ ನಿಜಲಿಂಗದ ಮಸ್ತಕಕ್ಕೆರೆದು ಜಿಡ್ಡು ಮಾಡಿ ತೊಳೆವ ಅಜ್ಞಾನಿ ನರಕ ಜೀವಿಗಳ ಮುಖವ ನೋಡಲಾಗದು. ಅದೇನುಕಾರಣವೆಂದಡೆ: "ಅರ್ಘ್ಯಂ ಪಾದ್ಯಂ ತಥಾಚಮ್ಯ ಸ್ನಾನಂ ಪಂಚಾಮೃತಂ ಯದಿ ಲಿಂಗದೇಹೀ ಸ್ವಲಿಂಕೃತ್ವಾರ್ಚ್ಯಂತೇ ಬಹಿರ್ನರಾಃ ತೇ ಪಾಷಂಡಾಃ ಕೃತಾಸ್ತೇನ ಕೃತಂಕರ್ಮನರಂ ನಾರಕಮ್'' ಇಂತೆಂದುದಾಗಿ. ಇದು ಕಾರಣ ಸ್ವಯಾಂಗಲಿಂಗದೇಹಿಗಳು ತಮ್ಮ ಲಿಂಗಮಂತ್ರವಿಡಿದು ಬಂದು ಲಿಂಗೋದಕ ಪಾದೋದಕಂಗಳಲ್ಲಿ ತಮ್ಮ ಕರ ಮುಖ ಪದ ಪ್ರಕ್ಷಾಲನವ ಮಾಡಿಕೊಂಬುದೆ? ಅಂಗಲಿಂಗಿಗಳಿಗೆ ಸ್ವರ್ಯಾರ್ಘ್ಯ ಪಾದ್ಯಾಚಮನವೆಂಬುದನರಿಯದೆ ಕೃತಕರ್ಮ ಭವಿಜೀವಿ ಶೈವಪಾಷಂಡರಂತೆ ಭಿನ್ನವಿಟ್ಟು ಮಾಡಿ ಫಲಪದಂಗಳನೈದಿಹೆನೆಂಬ ನರಕಜೀವಿಗಳನು ಕೂಡಲಚೆನ್ನಸಂಗಯ್ಯ ರವಿ ಸೋಮರುಳ್ಳನ್ನಕ್ಕ ನಾಯಕ ನರಕದಲ್ಲಿಕ್ಕುವ.