Index   ವಚನ - 918    Search  
 
ಅಚೇತನವಪ್ಪ ಶಿಲಾಮಯಲಿಂಗವು, ಸಚೇತನವಪ್ಪ ಭಕ್ತನ ಭವರೋಗವನೆಂತು ಕಳೆಯಬಲ್ಲುದು? ಎಂಬ ಬರುಮಾತಿನ ಮಾನವರ ಮಾತ ಕೇಳಲಾಗದು. ಅದೇನು ಕಾರಣವೆಂದಡೆ, ಮಿಸುನಿಯಿಂದುಂಟಾದ ಕಟಕ ಮಕುಟಾದಿ ತೊಡವುಗಳು ಮಿಸುನಿಯಲ್ಲದೆ ಮತ್ತೊಂದು ರೂಪಾಗಬಲ್ಲುದೆ ಹೇಳಾ? ಅದುಕಾರಣ, ಧರೆಯ ಕಠಿಣಾಂಗವಾದ ಶಿಲೆಯಲ್ಲೂ ಶಿವಾಂಶವಿರ್ಪುದು ಸಹಜವೆಂದರಿತು ಶ್ರೀಗುರು, ಶಾಸ್ತ್ರಸಮ್ಮತವಾದ ಶಿಲಾಮಯಲಿಂಗದಲ್ಲಿ ವ್ಯಕ್ತವಾಗುವಂತೆ ಶಿವಕಲೆಯ ಪ್ರತಿಷ್ಠಿಸಿ, ಇಷ್ಟಲಿಂಗವಾಗಿ ಮಾಡಿ ಶಿಷ್ಯನ ಕರಕಮಲಕ್ಕೆ ಕರುಣಿಸಿಕೊಟ್ಟು, ಆ ನಿರಾಕಾರವಪ್ಪ ಪರಬೊಮ್ಮವೆ ತಿಳಿದುಪ್ಪ ಬಿಳಿದುಪ್ಪವಾದಂತೆ ಸಾಕಾರವಾಗಿ ನಿನ್ನ ಕರಕಮಲಕ್ಕೆ ಬಂದಿರ್ಪುದು. 'ಯದ್ಭಾವಸ್ತದ್ಭವತಿ' ಎಂಬ ಪ್ರಮಾಣವುಂಟಾಗಿ, ಇದನಿನ್ನು ಸದ್ಭಾವದಿಂದರ್ಚಿಸೆಂದು ಅಪ್ಪಣೆಯಿತ್ತನು. ಈ ಮರ್ಮವನರಿಯದೆ ಮನಬಂದಂತೆ ಮಾತಾಡುವ ಮನುಜರ ಹುಳುಗೊಂಡದಲ್ಲಿಕ್ಕದೆ ಮಾಣ್ಬನೆ ನಮ್ಮ ಕೂಡಲಚೆನ್ನಸಂಗಮದೇವ.