Index   ವಚನ - 924    Search  
 
"ಅಣೋರಣೀಯಾನ್ ಮಹತೋ ಮಹೀಯಾನ್" ಎಂದು ಶ್ರುತಿವಿಡಿದು ಅಣು ರೇಣು ತೃಣಕಾಷ್ಠದೊಳಗೆ ಶಿವನು ಕೂಡೆ ಜಗಭರಿತನೆಂಬ ಪಾತಕರ ನುಡಿಯ ಕೇಳಲಾಗದು, ಅದೇನು ಕಾರಣವೆಂದಡೆ: ಜನ್ನಕ್ಕೆ ತಂದ ಕನ್ನೆಯಾಡು ಶ್ರುತಿಯಿಂದ ಹೊರಗು. ಸರ್ವವೂ ಶಿವಮಯವೆಂಬ ಪಾತಕರ ನುಡಿಗಿನ್ನೆಂತೊ? ಅಂತ್ಯಜ-ಅಗ್ರಜ, ಮೂರ್ಖ-ಪಂಡಿತರೆಂಬ ಭೇದಕ್ಕಿನ್ನೆಂತೊ? ಜಗದೊಳಗೆ ಶಿವ ಶಿವನೊಳಗೆ ಜಗವೆಂಬ ಭ್ರಮಿತರ ನುಡಿಗಿನ್ನೆಂತೋ? "ಅಗ್ನಿರಿತಿ ಭಸ್ಮ ವಾಯುರಿತಿ ಭಸ್ಮ ಜಲಮಿತಿ ಭಸ್ಮ ಸ್ಥಲಮಿತಿ ಭಸ್ಮ ವ್ಯೋಮೇತಿ ಭಸ್ಮ, ಭಸ್ಮೇತಿ ಭಸ್ಮ ಸರ್ವಮಿದಂ ಭಸ್ಮ" ಎಂದುದಾಗಿ ಜಗದೊಳಗೆ ಶಿವನಿಲ್ಲ, ಶಿವನೊಳಗೆ ಜಗವಿಲ್ಲ, ಶಿವ ಜಗವಾದ ಪರಿ ಇನ್ನೆಂತೊ? ಅದೆಂತೆಂದಡೆ: "ಯಂತ್ರಧಾರೀ ಮಹಾದೇವೋ ಯಂತ್ರಪಾಣಸ್ಸ ಏವ ಹೀ| ಯಂತ್ರಕರ್ಮ ಚ ಕರ್ತಾ ಯಂತ್ರವಾಹಾಯ ವೈ ನಮಃ"|| ಎಂದುದಾಗಿ, ಸಕಲಬ್ರಹ್ಮಾಂಡಗಳೆಂಬ ಯಂತ್ರಗಳ ವಾಹಕ ನಮ್ಮ ಕೂಡಲಚೆನ್ನಸಂಗಯ್ಯ.