ಅಯ್ಯಾ, ಸಮಸ್ತ ಮಾಯಾಬಲೆಯಲ್ಲಿ,
ಜನ್ಮಜನ್ಮಾಂತರವೆತ್ತತೊಳಲಿ ಬಳಲಿ
ಅಂತ್ಯದಲ್ಲಿ ಜ್ಞಾನೋದಯವಾಗಿ `ಶಿವಧೋ' ಎಂದು
ಗುರೂಪಾವಸ್ಥೆಯ ಮಾಡುತಿರ್ದ ಶಿವಕಳಾತ್ಮಂಗೆ
ಶ್ರಿಗುರು ಪ್ರತ್ಯಕ್ಷವಾಗಿ ಕೃಪಾದೃಷ್ಟಿಯಿಂದ ನೋಡಲು
ಆ ಶಿವಕಳಾತ್ಮನು ಅತಿಸಂತೋಷದಿಂದ
‘ಎಲೆ ಗುರುನಾಥನೆ, ಎನ್ನ ಅಪರಾಧವ ನೋಡದೆ
ನಿನ್ನ ದಯಾಂಬುಧಿಯಲ್ಲಿ ಮಡಗಿಕೋ,
ಎನ್ನ ಸರ್ವಾಧಾರ ಮೂರ್ತಿಯೆ’ ಎಂದು ಅಭಿನಂದಿಸಲು
ಆಗ, ಶ್ರೀಗುರುನಾಥನು ಮಹಾಸಂತೋಷ ಹುಟ್ಟಿ,
ಆ ಶಿವಕಳಾತ್ಮಂಗೆ ಪೂರ್ವದ
ಜಡಶೈವಮಾರ್ಗವ ಬಿಡಿಸಿ
ನಿಜ ವೀರಶೈವದೀಕ್ಷೆಯನೆ
ಇತ್ತು ಹಸ್ತಮಸ್ತಕಸಂಯೋಗವ ಮಾಡಿ,
ಅಂತರಂಗದಲ್ಲಿರುವ ಪ್ರಾಣಲಿಂಗವ ಬಹಿಷ್ಕರಿಸಿ,
ಕರಸ್ಥಲಕ್ಕೆ ತಂದುಕೊಟ್ಟನು.
ಮತ್ತಾ ಲಿಂಗವ ಸರ್ವಾಂಗದಲ್ಲಿ ಪೂರ್ಣವ ಮಾಡಿ
ಲಿಂಗಾಂಗ ಷಟ್ಸ್ಥಾನವ ತೋರಿ
ಚಿದ್ವಿಭೂತಿ, ರುದ್ರಾಕ್ಷಿ, ಪಂಚಾಕ್ಷರಿ, ಷಡಕ್ಷರಿ
ಮೊದಲಾದ ಸಪ್ತಕೋಟಿ ಮಹಾಮಂತ್ರವನರುಹಿ,
ಷಟ್ಸ್ಥಲಮಾರ್ಗ, ಷಡ್ವಿಧ ಶೀಲ,
ವ್ರತನೇಮಂಗಳನರುಹಿ,
ಷೋಡಶಭಕ್ತಿಯ ಮಾರ್ಗವ ತಿಳುಹಿ,
ಬತ್ತೀಸ ಕಳೆಯ ನೆಲೆಯನರುಹಿ
ಷೋಡಶವರ್ಣ, ದ್ವಾದಶಾಚಾರ,
ಸಗುಣನಿರ್ಗುಣಲೀಲೆಯ ಕರುಣಿಸಿ
ನನಗೂ ನಿನಗೂ ಚೈತನ್ಯಸ್ವರೂಪವಾದ
ನಿರಂಜನಜಂಗಮಲಿಂಗ
ಲಿಂಗಜಂಗಮವೆ ಗತಿಯೆಂದು ನಿರೂಪವ ಕೊಡಲು-
ಆಚರಣೆಯ ವಿಚಾರವ ಕರುಣಿಸಬೇಕಯ್ಯಾ ಸ್ವಾಮಿ
ಎಂದು ಬೆಸಗೊಳಲು,
ಕೇಳಯ್ಯಾ, ವರಕುಮಾರ ದೇಶಿಕೋತ್ತಮನೆ
ಆ ಲಿಂಗಜಂಗಮ ಜಂಗಮಲಿಂಗದಾಚರಣೆಯ ಸಂಬಂಧವ:
ಸದ್ಗುರುಮಾರ್ಗಹಿಡಿದ ಜಂಗಮ,
ಭಕ್ತನಾದ ನಿಜಪ್ರಸಾದಿ
ಇವರಿಬ್ಬರಾಚರಣೆಯ ನಿನ್ನೊಬ್ಬನಲ್ಲಿ
ಹುರಿಗೊಳಿಸಿಕೊಟ್ಟೆವು ನೋಡಯ್ಯಾ.
ಅದೆಂತೆಂದಡೆ: ಕ್ರಿಯಾಜಂಗಮಮೂರ್ತಿಗಳು
ನಿನ್ನರ್ಚನಾ ಸಮಯಕ್ಕೆ
ದಿವಾರಾತ್ರಿಗಳೆನ್ನದೆ ಒದಗಿ ಬಂದಲ್ಲಿ,
ಅಚ್ಚಪ್ರಸಾದಿಯೋಪಾದಿಯಲ್ಲಿ,
ಕ್ರಿಯಾಚರಣೆಯನ್ನಾಚರಿಸುವುದಯ್ಯಾ.
ನಿನ್ನ ಸಮಯೋಚಿತಕ್ಕೆ ಕ್ರಿಯಾಜಂಗಮ ದೊರೆಯದಿರ್ದಡೆ
ದಿವಾರಾತ್ರಿಯಲ್ಲಿ ನಿಚ್ಚಪ್ರಸಾದಿ ಸಂಬಂಧದಂತೆ
ಜ್ಞಾನಜಂಗಮಸ್ವರೂಪವಾದ ಇಷ್ಟಮಹಾಲಿಂಗದಲ್ಲಿ
ಚಿದ್ಘನತೀರ್ಥಪ್ರಸಾದವ ಸಮರ್ಪಿಸಿ
ತಾನಾ ಪರಿಣಾಮಪ್ರಸಾದದಲ್ಲಿ ಲೋಲುಪ್ತನಾದಾತನೆ
ಲಿಂಗಭಕ್ತನಾದ ಸಮಯಪ್ರಸಾದಿ ನೋಡಾ,
ಕೂಡಲಚೆನ್ನಸಂಗಮದೇವಾ.
Art
Manuscript
Music
Courtesy:
Transliteration
Ayyā, samasta māyābaleyalli,
janmajanmāntaravettatoḷali baḷali
antyadalli jñānōdayavāgi `śivadhō' endu
gurūpāvastheya māḍutirda śivakaḷātmaṅge
śriguru pratyakṣavāgi kr̥pādr̥ṣṭiyinda nōḍalu
ā śivakaḷātmanu atisantōṣadinda
‘ele gurunāthane, enna aparādhava nōḍade
ninna dayāmbudhiyalli maḍagikō,
enna sarvādhāra mūrtiye’ endu abhinandisalu
āga, śrīgurunāthanu mahāsantōṣa huṭṭi,
ā śivakaḷātmaṅge pūrvada
jaḍaśaivamārgava biḍisi
nija vīraśaivadīkṣeyane
ittu hastamastakasanyōgava māḍi,
Antaraṅgadalliruva prāṇaliṅgava bahiṣkarisi,
karasthalakke tandukoṭṭanu.
Mattā liṅgava sarvāṅgadalli pūrṇava māḍi
liṅgāṅga ṣaṭsthānava tōri
cidvibhūti, rudrākṣi, pan̄cākṣari, ṣaḍakṣari
modalāda saptakōṭi mahāmantravanaruhi,
ṣaṭsthalamārga, ṣaḍvidha śīla,
vratanēmaṅgaḷanaruhi,
ṣōḍaśabhaktiya mārgava tiḷuhi,
battīsa kaḷeya neleyanaruhi
ṣōḍaśavarṇa, dvādaśācāra,
saguṇanirguṇalīleya karuṇisi
nanagū ninagū caitan'yasvarūpavāda
niran̄janajaṅgamaliṅga
liṅgajaṅgamave gatiyendu nirūpava koḍalu-
ācaraṇeya vicārava karuṇisabēkayyā svāmi
Endu besagoḷalu,
kēḷayyā, varakumāra dēśikōttamane
ā liṅgajaṅgama jaṅgamaliṅgadācaraṇeya sambandhava:
Sadgurumārgahiḍida jaṅgama,
bhaktanāda nijaprasādi
ivaribbarācaraṇeya ninnobbanalli
hurigoḷisikoṭṭevu nōḍayyā.
Adentendaḍe: Kriyājaṅgamamūrtigaḷu
ninnarcanā samayakke
divārātrigaḷennade odagi bandalli,
accaprasādiyōpādiyalli,
Kriyācaraṇeyannācarisuvudayyā.
Ninna samayōcitakke kriyājaṅgama doreyadirdaḍe
divārātriyalli niccaprasādi sambandhadante
jñānajaṅgamasvarūpavāda iṣṭamahāliṅgadalli
cidghanatīrthaprasādava samarpisi
tānā pariṇāmaprasādadalli lōluptanādātane
liṅgabhaktanāda samayaprasādi nōḍā,
kūḍalacennasaṅgamadēvā.